ಸುಂಟಿಕೊಪ್ಪ: ಸಮೀಪದ ಪನ್ಯದ ಉದ್ದಿಬಾಣೆ ಮಠದಲ್ಲಿ ಎರಡು ದಿನಗಳ ಕಾಲ ನಡೆದ ಧರ್ಮ ದೈವದ ನೇಮೋತ್ಸವವು ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಶನಿವಾರ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆಯೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ನಂತರ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ರಾತ್ರಿ ಭಂಡಾರ ಮೆರವಣಿಗೆಯ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. ನಂತರ ಎಣ್ಣೆ ಅರ್ಪಣೆಯ ಮೂಲಕ ಪ್ರಮುಖ ಧರ್ಮ ಶಕ್ತಿ ದೈವವಾದ ಪಾಷಾಣ ಮೂರ್ತಿ (ಕಲ್ಲರ್ಟಿ)ಯ ನೇಮ ನಡೆದು ನೆರೆದಿದ್ದ ಭಕ್ತರಿಗೆ ನಂಬಿಕೆಯ ದರ್ಶನ ನೀಡಿತು.
ಭಾನುವಾರ ಮುಂಜಾನೆ ಪಂಜುರ್ಲಿ ಮತ್ತು ಗುಳಿಗ ಕೋಲದಲ್ಲಿ ಭಕ್ತರಲ್ಲಿ ತನ್ನ ಶಕ್ತಿಯ ಮೂಲಕ ದೈವ ನಂಬಿಕೆಯನ್ನು ಉಂಟುಮಾಡಿತು. ಬೆಳಿಗ್ಗೆ 10 ಗಂಟೆ ನಂತರ ಭಕ್ತರ ಹರಕೆಯ ಐದು ಕೊರಗಜ್ಜನ ನೇಮಗಳು ನಡೆದವು. ತನಿಯ ಕೊರಗ ದೈವದಲ್ಲಿ ತನ್ನ ಇಷ್ಟಾರ್ಥವನ್ನು ಬೇಡಿಕೊಂಡರಲ್ಲದೇ, ದೈವಕ್ಕೆ ಹರಕೆ ಅರ್ಪಿಸಿದರು.
ಮಧ್ಯಾಹ್ನದ ನಂತರ ಅಗೇಲು ಸೇವೆ ನಡೆಯಿತು. ಎರಡು ದಿನಗಳ ಕಾಲ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಾಡಿಸಲಾಗಿತ್ತು. ಹರದೂರು, ಪನ್ಯ, ಸುಂಟಿಕೊಪ್ಪ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಭಾಗಗಳಿಂದ ಭಕ್ತರು ಆಗಮಿಸಿ ದೈವದ ದರ್ಶನ ಮತ್ತು ಹರಕೆ ಅರ್ಪಿಸಿದರು.
ಮುಖ್ಯಸ್ಥರಾದ ಮೋನಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಮಣಿ ಮುಖೇಶ್, ಕೆ.ಪಿ.ಜಗನ್ನಾಥ್, ನಾಗೇಶ್ ಪೂಜಾರಿ, ರಮೇಶ್ ಪೂಜಾರಿ, ವೆಂಕಪ್ಪ, ಬೇಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.