ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಸೇರಿದಂತೆ ಕೊಡವರ ಪರವಾದ ಕಾನೂನು ಬದ್ಧ ಹಕ್ಕುಗಳ ಪ್ರತಿಪಾದನೆಯ ವಿಚಾರ ಸಂಕಿರಣ ಜೂನ್ 18ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಹೊರವಲಯದ ‘ಕ್ಯಾಪಿಟಲ್ ವಿಲೇಜ್’ನಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ಸುಪ್ರೀಂಕೋರ್ಟ್ ವಕೀಲರಾದ ವಿಕ್ರಮ್ ಹೆಗ್ಡೆ ಉಪನ್ಯಾಸ ನೀಡುವರು, ಅವರ ಪತ್ನಿ ಪ್ರಖ್ಯಾತ ಕಾನೂನು ತಜ್ಞೆ ಹಿಮಾ ಲಾರೆನ್ಸ್ ಭಾಗವಹಿಸಲಿದ್ದಾರೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಕ್ರಮ್ ಹೆಗ್ಡೆ ಅವರು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಸ್ವರ್ಣ ಪದಕ ವಿಜೇತರಾಗಿ ಪದವಿ ಪಡೆದ ನಂತರ, ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಜನ್ ಪೂವಯ್ಯ ಅವರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಕೊಡಗಿನ ಹಲವಾರು ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದರು. 2015ರಲ್ಲಿ ನವದೆಹಲಿಗೆ ತಮ್ಮ ವೃತ್ತಿಯನ್ನು ಸ್ಥಳಾಂತರಿಸಿದ ನಂತರ, ವಿಕ್ರಮ್ ಹೆಗ್ಡೆ ತಮ್ಮ ತಂಡದೊಂದಿಗೆ, ಸುಪ್ರೀಂ ಕೋರ್ಟ್ ಮತ್ತು ದೇಶಾದ್ಯಂತ ಇತರ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ದೈನಂದಿನ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳವರೆಗೆ ಕಕ್ಷಿದಾರರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಿದರು.
‘ಹಿಮಾ ಲಾರೆನ್ಸ್ ಅವರು ಪುಣೆಯ ‘ಸಿಂಬಿಯೋಸಿಸ್’ ಸಂಸ್ಥೆಯಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು. ಭಾರತದ ಸುಪ್ರೀಂಕೋರ್ಟ್‌ನಲ್ಲಿ ‘ಅಡ್ವೊಕೇಟ್ ಆನ್ ರೆಕಾರ್ಡ್’ ಆಗಿದ್ದಾರೆ ಮತ್ತು ಹಲವಾರು ವಾಣಿಜ್ಯ ಮತ್ತು ಸಂವಿಧಾನಿಕ ವಿವಾದಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳ ಮಾಧ್ಯಮಿಕ ಶಿಕ್ಷಣ ಮಂಡಳಿಯಂತಹ ಹಲವಾರು ಸರ್ಕಾರಿ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದಾರೆ’ ಎಂದರು.
ಡಾರ್ಜಿಲಿಂಗ್ ಗೂರ್ಖಾಗಿರಿ ಮಂಡಳಿಯಂತೆಯೇ ಲೇಹ್, ಲಡಾಖ್ ಮತ್ತು ಭಾರತದ ಈಶಾನ್ಯ ರಾಜ್ಯಗಳ ಪ್ರಾದೇಶಿಕ ಸ್ವಾಯತ್ತತೆಗೆ ಸಮಾನವಾಗಿ ಭಾರತೀಯ ಸಂವಿಧಾನದ 6ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಸ್ವಾಯತ್ತ ಪ್ರದೇಶ ಸ್ಥಾಪನೆಯಾಗಬೇಕು. ಅನಿಮಿಸ್ಟಿಕ್ ಏಕ-ಜನಾಂಗೀಯ ಕೊಡವರನ್ನು ಪ್ರಾಚೀನ, ಮೂಲ ನಿವಾಸಿ, ಸ್ಥಳೀಯ ಜನರು ಎಂದು ಗುರುತಿಸಬೇಕು, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಅಂತರರಾಷ್ಟ್ರೀಯ ಸಂಪ್ರದಾಯಗಳ ಅಡಿಯಲ್ಲಿ ಆನಿಮಿಸ್ಟಿಕ್ ಏಕ-ಜನಾಂಗೀಯ ಕೊಡವರು ಎಂಬ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕೊಡವರ ಅನುವಂಶಿಕ ಭೂ ಹಕ್ಕುಗಳನ್ನು ಮರಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಕೊಡವ ಸಾಂಪ್ರದಾಯಿಕ ಹಕ್ಕುಗಳು, ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ತಾಣಗಳ ರಕ್ಷಣೆಯಾಗಬೇಕು ಎಂದು ಆಗ್ರಹಿಸಿದರು.
ಸಿಕ್ಕಿಂನಲ್ಲಿರುವ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ‘ಸಂಘ’ ಅಮೂರ್ತ ಕ್ಷೇತ್ರದಂತೆಯೇ ಸಂಸತ್ತು ಮತ್ತು ರಾಜ್ಯದ ವಿಧಾನಸಭೆಯಲ್ಲಿ ಕೊಡವರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.