ADVERTISEMENT

ತೀರ್ಥೋದ್ಭವಕ್ಕೆ ತಲಕಾವೇರಿ ಅಣಿ

ಮಧ್ಯಾಹ್ನ 1.44ಕ್ಕೆ ಮುಹೂರ್ತ ನಿಗದಿ

ಕೆ.ಎಸ್.ಗಿರೀಶ್
Published 17 ಅಕ್ಟೋಬರ್ 2025, 0:58 IST
Last Updated 17 ಅಕ್ಟೋಬರ್ 2025, 0:58 IST
ಅ. 17ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವವಾಗುವ ಬ್ರಹ್ಮಕುಂಡಿಕೆ
ಅ. 17ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವವಾಗುವ ಬ್ರಹ್ಮಕುಂಡಿಕೆ    

ಮಡಿಕೇರಿ: ತಾಲ್ಲೂಕಿನ ತಲಕಾವೇರಿಯಲ್ಲಿ ಅ.17ರಂದು ಮಧ್ಯಾಹ್ನ 1.44ಕ್ಕೆ ‘ಕಾವೇರಿ ಪವಿತ್ರ ತೀರ್ಥೋದ್ಭವ’ಕ್ಕಾಗಿ ಸಕಲ ಸಿದ್ಧತಾ ಕಾರ್ಯಗಳೂ ಪೂರ್ಣಗೊಂಡಿವೆ. 

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ಭಗಂಡೇಶ್ವರ–ತಲಕಾವೇರಿ ದೇವಾಲಯಗಳು ಸಿಂಗಾರಗೊಂಡಿವೆ. ಮಧ್ಯಾಹ್ನದ ವೇಳೆ ತೀರ್ಥೋದ್ಭವ ನಡೆಯುವುದರಿಂದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಅದಕ್ಕಾಗಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತರನ್ನು ಭಾಗಮಂಡಲದಿಂದ ತಲಕಾವೇರಿಗೆ ಉಚಿತವಾಗಿ ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಪ್ರತಿ ವರ್ಷ ತೀರ್ಥೋದ್ಭವಾಗುತ್ತಿದ್ದಂತೆ ಬ್ರಹ್ಮಕುಂಡಿಕೆಯ ಕಲ್ಯಾಣಿಗೆ ಭಕ್ತರು ನುಗ್ಗಿ ಮುಳುಗೇಳುತ್ತಿದ್ದರು. ಅದನ್ನು ತಡೆಯಲು ಈ ಬಾರಿ ಸುತ್ತಲೂ ಸುಮಾರು 10 ಅಡಿಯಷ್ಟು ಎತ್ತರದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ADVERTISEMENT

ಭಾಗಮಂಡಲದಿಂದ ಚಿನ್ನಾಭರಣಗಳು ತಲಕಾವೇರಿ ತಲುಪಿವೆ. ಬ್ರಹ್ಮಕುಂಡಿಕೆಯನ್ನು ಹೂವುಗಳಿಂದ ಸಿಂಗರಿಸಲಾಗುತ್ತಿದೆ. ಹೂಗಳ ಖರೀದಿಗಾಗಿಯೇ ₹6.70 ಲಕ್ಷ ಹಣ ವ್ಯಯಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಬರುವ ಪಾದಯಾತ್ರಿಕರಿಗಾಗಿ ಅಲ್ಲಲ್ಲಿ ಸಂಚಾರಿ ಶೌಚಾಲಯಗಳನ್ನು ಅಳವಡಿಸಲಾಗಿದೆ.

ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳು ನಿರಂತರ ಅನ್ನಸಂತರ್ಪಣಾ ಕಾರ್ಯ ನಡೆಯಲಿದೆ. ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡು ಮತ್ತು ಕೇರಳ ಭಾಗಗಳಿಂದ ಹೆಚ್ಚಿನ ಭಕ್ತರು ಬರುವ ಸಾಧ್ಯತೆಗಳಿವೆ. ತೀರ್ಥ ಸಂಗ್ರಹಣೆಗೆ ಸಹಕರಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ತೀರ್ಥೋದ್ಭವದ ನಂತರ ಒಂದು ತಿಂಗಳು ತಲಕಾವೇರಿಯಲ್ಲಿ ಜಾತ್ರೆಯೋಪಾದಿಯಲ್ಲಿ ಭಕ್ತರು ನಿತ್ಯವೂ ಸೇರಲಿದ್ದಾರೆ.

ಪ್ರಧಾನ ಅರ್ಚಕ ಗುರುರಾಜ್ ಆಚಾರ್, ‘ಪವಿತ್ರ ತೀರ್ಥೋದ್ಭವದಂದು ಮಹಾ ಸಂಕಲ್ಪ, ಕುಂಕುಮಾರ್ಚನೆ ಸೇರಿದಂತೆ ಪೂಜಾ ವಿಧಿ ವಿಧಾನಗಳು ಬೆಳಿಗ್ಗೆಯಿಂದಲೇ ಆರಂಭವಾಗಲಿದೆ. 12 ಜನರನ್ನು ಒಳಗೊಂಡ ಅರ್ಚಕರ ತಂಡ ಪಾಲ್ಗೊಳ್ಳಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಲಿದ್ದಾರೆ.

ಅ. 17ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವವಾಗುವ ಬ್ರಹ್ಮಕುಂಡಿಕೆ
ಅ. 17ರಂದು ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವಕ್ಕಾಗಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುರುವಾರ  ಸಿದ್ಥತಾ ಕಾರ್ಯಗಳು ನಡೆದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.