ಮಡಿಕೇರಿ: ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇಗುಲದಲ್ಲಿ ಕೊಡವರ ಸಾಂಪ್ರದಾಯಿಕ ದಿರಿಸನ್ನು ಧರಿಸಿದ ಪುರುಷರಿಗೆ ಕೆಲವರು ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಜ. 7ರವರೆಗೂ ಜಿಲ್ಲಾಡಳಿತ ವಿಸ್ತರಿಸಿದೆ. ವಿವಾದ ಕುರಿತು ಚರ್ಚಿಸಲು ಗುರುವಾರ (ಜ.2) ದೇಗುಲದ ಆಡಳಿತ ಮಂಡಳಿಯು ಗ್ರಾಮಸ್ಥರ ಸಭೆ ಕರೆದಿದೆ.
ಈ ನಡುವೆ, ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಸಮಿತಿ ಸದಸ್ಯ ಎಚ್.ಎಸ್. ಪುರುಷೋತ್ತಮ, ‘ದೇಗುಲದಲ್ಲಾದರೂ ಎಲ್ಲ ಜಾತಿ, ಜನಾಂಗಗಳ ಮಧ್ಯೆ ಸಮಾನತೆ ಇರಲಿ ಎಂಬ ಉದ್ದೇಶದಿಂದ ಯಾವುದೇ ಜನಾಂಗದ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಪ್ರವೇಶಿಸುವುದು ಬೇಡ ಎಂಬ ನಿಯಮವನ್ನು ಕೊಡವರೂ ಸೇರಿದಂತೆ ಎಲ್ಲ ಜನಾಂಗದವರೂ ಸದಸ್ಯರಾಗಿರುವ ದೇವಾಲಯ ಸಮಿತಿಯಲ್ಲಿ ರೂಪಿಸಲಾಗಿದೆ. ಇದನ್ನು ಜಿಲ್ಲಾಡಳಿತ ಗೌರವಿಸಬೇಕು’ ಎಂದು ಕೋರಿದರು.
‘ಗ್ರಾಮದಲ್ಲಿ ಮೇಲ್ವರ್ಗದವರು ಎನಿಸಿರುವ ಕೊಡವರು ಹಾಗೂ ಅರೆಭಾಷೆಗೌಡರು ತಮ್ಮ ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿಕೊಂಡು ಬಂದು ಪರಿಶಿಷ್ಟ ಜಾತಿಗೆ ಸೇರಿದ ನಮ್ಮನ್ನು ಮೂಲೆಗುಂಪು ಮಾಡುತ್ತಾರೆ. ಬಹಳಷ್ಟು ದೇಗುಲಗಳಿಗೆ ಇನ್ನೂ ನಮಗೆ ಪ್ರವೇಶ ನೀಡುತ್ತಿಲ್ಲ. ಈ ದೇಗುಲದವರು ನಮ್ಮನ್ನೂ ಸೇರಿದಂತೆ ಎಲ್ಲ ಜನಾಂಗದವರಿಗೂ ಪ್ರವೇಶ ನೀಡಿರುವುದು ಮಾತ್ರವಲ್ಲ ಸಮಿತಿಯಲ್ಲೂ ಸದಸ್ಯತ್ವ ನೀಡಿದ್ದಾರೆ. ಸಾಂಪ್ರದಾಯಿಕ ದಿರಿಸಿನ ಹೆಸರಲ್ಲಿ ಮತ್ತೆ ಅಸಮಾನತೆ ಆಚರಿಸುವುದು ಬೇಡ’ ಎಂದು ಆಗ್ರಹಿಸಿದರು.
ಗ್ರಾಮಸ್ಥ ಕಟ್ಟೆಮನೆ ಸೋನು ಮಾತನಾಡಿ, ‘ಎಲ್ಲರೂ ಪಂಚೆ ಇಲ್ಲವೇ ಪ್ಯಾಂಟು, ಶರ್ಟ್ ಧರಿಸಿ ಬಂದರೆ ಯಾವುದೇ ಜಾತಿ, ಜನಾಂಗದ ಗುರುತು ಪತ್ತೆಯಾಗದು. ಸಮಾನತೆಗಾಗಿ ಮಾತ್ರವೇ ಯಾವುದೇ ಜನಾಂಗದ ಸಾಂಪ್ರದಾಯಿಕ ದಿರಿಸು ಬೇಡ ಎಂದು ನಾವು ಪ್ರತಿಪಾದಿಸುತ್ತಿದ್ದೇವೆ. ಕಷ್ಟಪಟ್ಟು ದೇಗುಲ ಕಟ್ಟಿರುವ ನಮ್ಮ ಭಾವನೆಗಳನ್ನು ಗೌರವಿಸಿ’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.