ಕುಶಾಲನಗರ: ಬಸವಣ್ಣನವರ ವಚನಗಳು ಹಾಗೂ ಶಿವಶರಣೆಯರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ. ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಮಹತ್ವದ ಕೊಡುಗೆ ನೀಡಿದೆ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಸೋನಹಳ್ಳಿ ಎಂ ಸಿದ್ದರಾಜಪ್ಪ ಹೇಳಿದರು.
ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಕುಶಾಲನಗರ ಪಟ್ಟಣದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಐದನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ವಚನ ಸಾಹಿತ್ಯ ಹಾಗೂ ಶಿವ ಶರಣ– ಶರಣೆಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಕ್ತಿ ಭಂಡಾರಿ, ಮಹಾನ್ ಮಾನವತಾವಾದಿ ಹಾಗೂ ಸಾಮಾಜಿಕ ಕ್ರಾಂತಿ ಪುರುಷ ಜಗಜ್ಯೋತಿ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಬಸವಣ್ಣನವರ ಸಾರಥ್ಯದಲ್ಲಿ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಯು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು ಎಂದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲಾ ವರ್ಗಗಳ ವಚನಕಾರರ ಕಾಯಕ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಬಸವಣ್ಣನವರಂತಹ ಪರಮಜ್ಞಾನಿಗಳ ವಚನಗಳನ್ನು ಕೇಳಿ ಪಾಲಿಸಿದರೆ ಪ್ರತಿಯೊಬ್ಬರ
ಬದುಕು ಹಸನಾಗುತ್ತದೆ ಎಂದರು. ಮೌಲ್ಯಯುತವಾದ ವಚನ ಸಾಹಿತ್ಯವನ್ನು ಮಕ್ಕಳಿಗೆ ಬಾಲ್ಯದಿಂದಲೇ ಬೋಧಿಸುವ ಕೆಲಸದಲ್ಲಿ ಪೋಷಕರ ಪಾತ್ರವು ಪ್ರಮುಖವಾಗಿದೆ ಎಂದರು.
ಶನಿವಾರ ಸಂತೆ ಶಿಡಿಗಳಲೆ ಮಠ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ, ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್ ನಂದೀಶ್, ಸಮಾಜ ಸೇವಕ ಕೆ.ಎನ್ ವಸಂತ್, ಮಹಾಸಭಾದ ವಿವಿಧ ಘಟಕಗಳ ಪ್ರಮುಖರಾದ ಎಂ.ಎಸ್. ಶಿವಾನಂದ, ಶುಭಶೇಖರ್, ಧರ್ಮೇಂದ್ರ, ಬಸವರಾಜ್, ಆದರ್ಶ್, ಎನ್.ಎಂ ರಾಜೇಶ್, ರುದ್ರ ಪ್ರಸನ್ನ, ದೀಪಿಕಾ ಕರುಣ್, ಕಮಲಾ ಉದಯಕುಮಾರ್, ಮನು ಜಗದೀಶ್, ಎಂ.ಕೆ. ಧನರಾಜ್, ಸುಶೀಲಮ್ಮ ಬಸವರಾಜ್, ಬಿ.ಬಿ. ಲೋಕೇಶ್, ವಿ.ಸಿ.ಅಜಿತ್, ವಿಜಯ ಪಾಲಾಕ್ಷ, ಸರೋಜ ಆರಾಧ್ಯ ಇದ್ದರು. ಶಿಕ್ಷಕಿ ಎಚ್.ಎಸ್. ಉಮಾದೇವಿ ಸ್ವಾಗತಿಸಿದರು. ಶಿಕ್ಷಕಿಯರಾದ ಟಿ.ವಿ.ಶೈಲಾ, ಬಿ.ಬಿ.ಹೇಮಲತಾ ಕಾರ್ಯಕ್ರಮ. ನಿರ್ವಹಿಸಿದರು. ಶಿಕ್ಷಕಿ ವಿದ್ಯಾ ಅಜಿತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.