ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸೋಮವಾರ ತಡರಾತ್ರಿಯಿಂದ ಒಂದೇ ಸಮನೆ ಸುರಿದ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ಮುಂದುವರಿದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ನಂತರವೂ ಬೀಸಿದ ಶೀತಗಾಳಿ ಹಾಗೂ ಜಿಟಿಜಿಟಿ ಮಳೆಯಿಂದ ಜನರು ಅಕ್ಷರಶಃ ನಡುಗಿದರು.
ಮೃಗಶಿರಾ ಮಳೆಯು ಇದೀಗ ತನ್ನ ಅಬ್ಬರದ ಸ್ವರೂಪವನ್ನು ತೋರಿಸಿದೆ. ಈ ವರ್ಷ ಜೂನ್ ತಿಂಗಳಿನಲ್ಲಿ ಇಷ್ಟು ಪ್ರಮಾಣದಲ್ಲಿ ಇಷ್ಟು ವಿಶಾಲ ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಭಾರಿ ಮಳೆ ಸುರಿದಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡದೇ ಆರೆಂಜ್ ಅಲರ್ಟ್ ನೀಡಿದ್ದರೂ, ರೆಡ್ ಅಲರ್ಟ್‌ನಂತೆಯೆ ಮಳೆ ಸುರಿದಿರುವುದು ಅಚ್ಚರಿಗೂ ಕಾರಣವಾಗಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬೀಸುತ್ತಿದ್ದ ಜೋರು ಗಾಳಿ ಹಾಗೂ ಸುರಿಯುತ್ತಿದ್ದ ಮಳೆಯ ಸ್ವರೂಪ ಗಮನಿಸಿ ಬೆಳಿಗ್ಗೆಯೇ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದರು. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗುವುದು ತಪ್ಪಿತು.
ಮಡಿಕೇರಿ ನಗರದ ಎಲ್ಲ ರಾಜಕಾಲುವೆಗಳೂ ಹೊಳೆಯಂತೆ ರಭಸದಿಂದ ಹರಿಯತೊಡಗಿದವು. ಚರಂಡಿಗಳು ತುಂಬಿ ಹರಿದವು. ಮಂಗಳವಾರವೂ ಕನಿಷ್ಠ ಹಾಗೂ ಗರಿಷ್ಠ ಎರಡೂ ತಾಪಮಾನಗಳು ಕುಸಿತ ಕಂಡವು. ಇದರಿಂದ ನಗರದಲ್ಲಿ ಚಳಿಯ ವಾತಾವರಣ ಮುಂದುವರಿಯಿತು.
ಇಂದೂ ಸಹ ಇದೆ ‘ಆರೆಂಜ್ ಅಲರ್ಟ್’ ಎಲ್ಲೆಡೆ ವ್ಯಾಪಿಸಿದೆ ಚಳಿಯ ವಾತಾವರಣ ಬಿಸಿಲಿಗಾಗಿ ಕಾಯುತ್ತಿವೆ ಪ್ರಾಣಿ, ಪಕ್ಷಿಗಳು
ಬರೆ ಕುಸಿತ ಪ್ರದೇಶಗಳಿಗೆ ಅಧ್ಯಕ್ಷೆ ಉಪಾಧ್ಯಕ್ಷ ಭೇಟಿ ನಿರಂತರವಾಗಿ ಸುರಿದ ಮಳೆಯಿಂದ ನಗರದ ಅಲ್ಲಲ್ಲಿ ಬರೆಕುಸಿತಗಳು ಸಂಭವಿಸಿದವು. ಮುತ್ತಪ್ಪ ದೇವಾಲಯದ ಬಳಿ ವಿದ್ಯುತ್ ಕಂಬವೊಂದು ಬೀಳುವ ಹಂತದಲ್ಲಿದ್ದು ಸೆಸ್ಕ್ ಸಿಬ್ಬಂದಿ ಹೊಸ ವಿದ್ಯುತ್ ಕಂಬವನ್ನು ಅಳವಡಿಸಿದರು. ಬರೆ ಕುಸಿತವಾಗಿರುವ ಪ್ರದೇಶಗಳಿಗೆ ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೆಡೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಹೆಚ್ಚಿನ ಅನಾನುಕೂಲ ಆಗದಂತೆ ಕ್ರಮ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.