ADVERTISEMENT

ಮೂವರು ಮಹಿಳೆಯರ ಬಂಧನ

ಶಾಸ್ತ್ರ ಹೇಳುವ ನೆಪದಲ್ಲಿ ಮೋಸ: 135 ಗ್ರಾಂ ಚಿನ್ನ, ₹ 27 ಸಾವಿರ ನಗದು ವಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 2:14 IST
Last Updated 10 ಏಪ್ರಿಲ್ 2021, 2:14 IST

ಕುಶಾಲನಗರ: ಪಟ್ಟಣದ ವಿವಿಧೆಡೆ ಶಾಸ್ತ್ರ ಹೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಚಿನ್ನ ಹಾಗೂ ನಗದು ಲಪಟಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವೇದಾವತಿ ನಗರದ ಭಜನಾ ಮಂದಿರ ರಸ್ತೆಯ ಲಕ್ಷ್ಮಿ, ರಾಣೆಬೆನ್ನೂರು ನಗರ ಆಂಜನೇಯ ಬಡಾವಣೆಯ ಲಕ್ಷ್ಮಿ ಹಾಗೂ ಸುಜಾತಾ ಬಂಧಿತರು.

ಆರೋಪಿಗಳನ್ನು ಪೊಲೀಸರು ಕೊಪ್ಪ ಕಾಫಿ ಡೇ ಸಮೀಪದ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಬಂಧಿಸಿದ್ದಾರೆ. ಬಂಧಿತರಿಂದ 135 ಗ್ರಾಂ ಚಿನ್ನ ಹಾಗೂ ₹ 27,000 ನಗದು ವಶ ಪಡಿಸಿಕೊಂಡಿದ್ದಾರೆ.

ADVERTISEMENT

ಈಚೆಗೆ ಆರೋಪಿ ಲಕ್ಷ್ಮಿಯು ಪಟ್ಟಣದ ಬೈಚನಹಳ್ಳಿಯ ಲಕ್ಷ್ಮಿ ದೇವರಾಜು ಅವರ ಮನೆಗೆ ಹೋಗಿ ಶಾಸ್ತ್ರ ಹೇಳುವ ನೆಪದಲ್ಲಿ ಟಿಫನ್ ಬಾಕ್ಸ್‌ಗೆ ಮನೆಯಲ್ಲಿರುವ ಚಿನ್ನ ಮತ್ತು ಹಣ ಹಾಕುವಂತೆ ಹೇಳಿದ್ದಾರೆ. ‘ನಿನ್ನ ಎಲ್ಲ ಕಷ್ಟವನ್ನು ಪರಿಹಾರ ಮಾಡುತ್ತೇನೆ’ ಎಂದು ನಂಬಿಸಿ ಮತ್ತು ಬರುವ ಪುಡಿಯನ್ನು ಜ್ಯೂಸ್‌ನಲ್ಲಿ ಬೆರಸಿ ಕುಡಿಸಿ ಮಂಕು ಬರುವಂತೆ ಮಾಡಿದ್ದಳು. ನಂತರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಳು. ಮೂವರು ಮಹಿಳೆಯರು ಇದೇ ರೀತಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೋಸ ಹೋದ ಲಕ್ಷ್ಮಿ ಮಗ ಶ್ರೀಕಾಂತನೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು.

ಡಿವೈಎಸ್ಪಿ ಶೈಲೇಂದ್ರ ಅವರು ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹೇಶ್ ಹಾಗೂ ಟೌನ್ ಠಾಣೆಯ ಪಿಎಸ್ಐ ಗಣೇಶ್ ನೇತೃತ್ವದಲ್ಲಿ ತಂಡ ರಚಿಸಿ ಮಹಿಳೆಯರನ್ನು ಪತ್ತೆ ಹಚ್ಚಲು ಕ್ರಮ‌ಕೈಗೊಂಡರು.

‘ಪಟ್ಟಣದ ವಾರದ ಸಂತೆ ಹಾಗೂ ಗ್ರಾಮಗಳಲ್ಲಿ ಇಂಥ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ. ಅಮಾಯಕರನ್ನು ಗುರಿ ಮಾಡಿಕೊಂಡು ಮೋಸ ಮಾಡುವ ಕಳ್ಳರ ತಂಡ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಮಹಿಳೆಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಡಿವೈಎಸ್ಪಿ ಶೈಲೇಂದ್ರ ಮನವಿ
ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್ಐ ಗೋಪಾಲ್, ಸಿಬ್ಬಂದಿಗಳಾದ ಗಣೇಶ್, ಸಂದೀಪ್ ಕುಮಾರ್, ರಂಜಿತ್, ನಿಶಾ, ಸೌಮ್ಯ ಪಾಲ್ಗೊಂಡಿದ್ದರು.

ಪ್ರಕರಣವನ್ನು ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಹುಮಾನ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.