ವಿರಾಜಪೇಟೆ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರವನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆಯ ಮಾಜಿ ಸ್ವೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ‘ಕೇಂದ್ರ ಸರ್ಕಾರವು ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಪ್ರಾರಂಭ ಮಾಡಿರುವ ಜನೌಷಧ ಕೇಂದ್ರವನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೊತೆಗೆ ಅಭಿವೃದ್ಧಿಯೂ ಶೂನ್ಯವಾಗಿದೆ. ಜನೌಷಧ ಕೇಂದ್ರದಿಂದ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುತ್ತಿತ್ತು, ಅದನ್ನು ಮುಚ್ಚುವ ಮೂಲಕ ಬಡವರಿಗೆ ತೊಂದರೆ ಕೊಡಲು ಸರ್ಕಾರ ಮುಂದಾಗಿದೆ. ಕೂಡಲೇ ಜನೌಷಧಿ ಕೇಂದ್ರಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ’ ಎಚ್ಚರಿಕೆ ನೀಡಿದರು.
ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ‘ಜನೌಷಧಿ ಕೇಂದ್ರಗಳನ್ನು ಸೇವಾ ಮನೋಭಾವದಿಂದ ಆರಂಭಿಸಲಾಗಿದೆ. ಇದರಲ್ಲಿ ಮಾಲೀಕರಿಗೆ ಶೇ 20ರಷ್ಟು ಮಾತ್ರ ಲಾಭಂಶ ಬರುತ್ತದೆ. ಜನೌಷಧಿ ಕೇಂದ್ರ ಮತ್ತು ಇತರ ಔಷಧಿ ಅಂಗಡಿಗಳಲ್ಲಿ ಲಭ್ಯವಾಗುವ ಔಷಧಿಗಳ ಬೆಲೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಡವರು ಸೇರಿದಂತೆ ರೋಗಿಗಳಿಗೆ ಅನುಕೂಲವಾಗುತ್ತಿರುವ ಜನೌಷಧಿ ಕೇಂದ್ರವನ್ನು ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ತಾಲ್ಲೂಕು ಅಧ್ಯಕ್ಷ ಸುವೀನ್ ಗಣಪತಿ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಪ್ರಮುಖರಾದ ಪಟ್ರಪಂಡ ರಘು ನಾಣಯ್ಯ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಮನು ಕುಮಾರ್, ಮಡಿಕೇರಿ ನಗರದ ಸಭೆ ಸದಸ್ಯ ಅಪ್ಪಣ್ಣ ಮತ್ತು ಸತೀಶ್, ವಾಟೇರಿರ ಬೋಪಣ್ಣ, ವಿರಾಜಪೇಟೆ ಪುರಸಭೆಯ ಸದಸ್ಯರಾದ ಜೂನಾ, ಸುಭಾಷ್, ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.