ADVERTISEMENT

Union budget–2023 | ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:22 IST
Last Updated 2 ಫೆಬ್ರುವರಿ 2023, 6:22 IST
ಪ್ರತಾಪಸಿಂಹ
ಪ್ರತಾಪಸಿಂಹ   

ಮಡಿಕೇರಿ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕೊಡಗಿಗೆ ಯಾವುದೇ ವಿಶೇಷ ಕೊಡುಗೆಗಳನ್ನು ನೀಡಿಲ್ಲ ಎಂಬ ಅಸಮಾಧಾನ ಕೂಗು ಎದ್ದಿದೆ. ಪ್ರವಾಸೋದ್ಯಮ ಹಾಗೂ ಕಾಫಿ ಬೆಳೆ ಪ್ರಧಾನವಾಗಿರುವ ಕೊಡಗಿಗೆ ಕೇಂದ್ರ ಸರ್ಕಾರ ಈ ಬಾರಿಯಾದರೂ ವಿಶೇಷ ಅನುದಾನ ನೀಡಲಿದೆಯೇ ಎಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಯಿತು.

ಕರ್ನಾಟಕ ಬೆಳೆಗಾರರ ಒಕ್ಕೂಟ ನಿಯೋಗವು ಸುಮಾರು ಒಂದು ತಿಂಗಳಿಗೂ ಮುಂಚೆಯೇ ನವದೆಹಲಿಗೆ ತೆರಳಿ ಕಾಫಿ ಬೆಳೆಗಾರರಿಗೆ ಪೂರಕವಾಗಿರುವ ರೀತಿಯಲ್ಲಿ ಎನ್‌ಡಿಆರ್‌ಎಫ್ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂಬ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಿತ್ತು. ಆದರೆ, ಈ ಮನವಿಯನ್ನು ಬಜೆಟ್‌ನಲ್ಲಿ ಪರಿಗಣಿಸಿಲ್ಲ ಎಂಬ ಅಸಮಾಧಾನ ಬೆಳೆಗಾರರಲ್ಲಿದೆ.

ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಕೊಡಗು ಜಿಲ್ಲೆಗೆ ವಿಶೇಷ ಯೋಜನೆಗಳು ಸಿಗಬಹುದು ಎಂಬ ಆಶಾಭಾವನೆ ಮೂಡಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಲ ತಿಂಗಳುಗಳ ಹಿಂದೆ ಇಲ್ಲಿಗೆ ಬಂದಾಗ ಕೇಬಲ್ ಕಾರ್ ಯೋಜನೆಯ ಪ್ರಸ್ತಾಪ ಮಾಡಿದ್ದರು. ಹಾಗಾಗಿ, ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಏನಾದರೊಂದು ಇರಲಿದೆ ಎಂಬ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಬಜೆಟ್‌ನಲ್ಲಿ ಕೊಡಗಿಗೆ ಎಂದು ನಿರ್ದಿಷ್ಟವಾದ ಯೋಜನೆಗಳು ಘೋಷಣೆಯಾಗದಿರುವುದು ನಿರಾಸೆ ಮೂಡಿಸಿದೆ.

ADVERTISEMENT

ಇಷ್ಟೆಲ್ಲದರ ಮಧ್ಯೆಯೂ ಪ್ರವಾಸೋದ್ಯಮ ವಲಯಕ್ಕೆ ವಿಶೇಷ ಪ್ರಾಧ್ಯಾನತೆಯನ್ನು ಬಜೆಟ್‌ನಲ್ಲಿ ನೀಡಿರುವುದು ಆಸೆಯನ್ನು ಜೀವಂತವಾಗಿರಿಸಿದೆ. ಮುಂದೆ ವಿಶೇಷ ಅನುದಾನಗಳು ಸಿಗುವ ಭರವಸೆ ಇದೆ ಎಂದು ಬಿಜೆಪಿಯ ಜನಪ್ರತಿನಿಧಿಗಳು ಹೇಳುತ್ತಾರೆ.

ಅತಿಯಾದ ಮಳೆ, ರೋಗ ಬಾಧೆ, ಕಾಡಾನೆ ಸಮಸ್ಯೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ, ಬ್ಯಾಂಕ್‌ನಲ್ಲಿ ಏರುತ್ತಿರುವ ಸಾಲ ಸೇರಿದಂತೆ ನಿರಂತರ ಸಂಕಷ್ಟದಲ್ಲಿರುವ ಕಾಫಿ ಉದ್ದಿಮೆ ಚೇತರಿಕೆಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಗತಿಗೆ ಪೂರಕ ಬಜೆಟ್
ಇದು ದೇಶದ ಅರ್ಥವ್ಯವಸ್ಥೆಯನ್ನು ಸರಿಯಾಗಿ ದಿಕ್ಕಿನಲ್ಲಿ ಕರೆದುಕೊಂಡು ಹೋಗುವಂತಹ ಬಜೆಟ್. ಇದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾದ ಬಜೆಟ್‌ ಅಲ್ಲ. ದೇಶಕ್ಕೆ ದಿಕ್ಕು ನೀಡುವಂತಹ ಬಜೆಟ್. ಭದ್ರ ಮೇಲ್ದಂಡೆ ಯೋಜನೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ, ರೈಲ್ವೆಗೆ ಹೆಚ್ಚಿನ ಅನುದಾನ... ಹೀಗೆ ಸಾಲು ಸಾಲು ಅಂಶಗಳು ರಾಜ್ಯ, ದೇಶಕ್ಕೆ ಅನುಕೂಲಕರವಾಗಿದೆ.
ಪ್ರತಾಪಸಿಂಹ, ಸಂಸದ

ಅತ್ಯುತ್ತಮ, ಜನಪರ ಬಜೆಟ್
ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ ಅತ್ಯುತ್ತಮವಾದ ಹಾಗೂ ಜನಪರವಾದ ಬಜೆಟ್. ಸಮಾಜದ ಎಲ್ಲ ವರ್ಗದ ಜನರಿಗೂ ಒಂದಲ್ಲ ಒಂದು ರೀತಿಯಲ್ಲಿ ಇದರಿಂದ ಅನುಕೂಲವಾಗಲಿದೆ. ರೈತಾಪಿ ವರ್ಗದವರಿಗೆ ಬಜೆಟ್ ಇತಿಹಾಸದಲ್ಲೇ ಮೊದಲು ಎಂದ ಹೇಳಬಹುದಾದಷ್ಟು ದೊಡ್ಡ ಮೊತ್ತದ ಸಾಲವನ್ನು ಘೋಷಣೆ ಮಾಡಲಾಗಿದೆ. ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ಘೋಷಣೆಗೆ ಪೂರಕವಾಗಿದೆ.
–ಕೆ.ಜಿ.ಬೋಪಯ್ಯ, ಶಾಸಕ

ಕೊಡಗಿಗೂ ಅನುಕೂಲವಾಗಲಿದೆ
ಕರ್ನಾಟಕಕ್ಕೆ ಸಂಬಂಧಿಸಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಆದಾಯ ತೆರಿಗೆ ವಿನಾಯಿತಿ ನೀಡಿರುವುದು, ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಆಶಾದಾಯಕ ಬೆಳವಣಿಗೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ರೈತರಿಗೆ ವಿಶೇಷ ಅನುಕೂಲ ಮಾಡಿ ಕೊಡಲಾಗಿದೆ. ಜನಪರ ಬಜೆಟ್ ಇದು. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದ್ದು, ಕೊಡಗಿಗೂ ಅನುಕೂಲವಾಗಲಿದೆ.
–ಎಂ.ಪಿ.ಅಪ್ಪಚ್ಚು ರಂಜನ್, ಶಾಸಕ

ಒಳ್ಳೆಯ ಬಜೆಟ್
ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಯಿಂದ ಇದು ಒಳ್ಳೆಯ ಬಜೆಟ್ ಮಾತ್ರವಲ್ಲ ದೂರದೃಷ್ಟಿಯ ಬಜೆಟ್. ಮಹಿಳಾ ಮತ್ತು ಯುವ ಸಬಲೀಕರಣದ ಅಂಶಗಳು ಇವೆ. ತೆರಿಗೆ ಹೊರೆ ಇಳಿಸಲಾಗಿದೆ. ಕೃಷಿಗೆ ಉತ್ತೇಜನ ನೀಡಲಾಗಿದೆ.
–ರಾಬಿನ್‌ ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ

ಕೊಡಗಿಗೆ ಕೊಡುಗೆಯೇ ಇಲ್ಲ
ವಿಶೇಷವಾಗಿ ಕೊಡಗಿಗೆ, ಇಲ್ಲಿನ ಕಾಫಿ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗುವಂತಹ ಯೋಜನೆಗಳು ಇಲ್ಲ. ವನ್ಯಜೀವಿ– ಮಾನವ ಸಂಘರ್ಷ ತಡೆಗೆ ವಿಶೇಷ ಆಸಕ್ತಿ ವಹಿಸಿಲ್ಲ. ಒಟ್ಟಾರೆ, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಹೇಳಿಕೊಳ್ಳುವಂತಹ ವಿಶೇಷ ಅಂಶಗಳು ಗೋಚರಿಸುತ್ತಿಲ್ಲ.
–ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ನಿರಾಶಾದಾಯಕ ಬಜೆಟ್
ಚುನಾವಣೆಯನ್ನೇ ದೃಷ್ಟಿಯಲ್ಲಿರಿಸಿಕೊಂಡ ಬಜೆಟ್ ಇದು. ಕ್ರೀಡೆ, ಕಾಫಿ, ಸೇನಾ ಕ್ಷೇತ್ರದಲ್ಲಿ ದೇಶದಲ್ಲೇ ಖ್ಯಾತಿ ಗಳಿಸಿರುವ ಕೊಡಗಿಗೆ ಯಾವುದೇ ಫಲ ಇಲ್ಲ. ಕೊಡಗಿಗೆ ಸಂಬಂಧಿಸಿದಂತೆ ಇದೊಂದು ನಿರಾಶಾದಾಯಕ ಬಜೆಟ್. ಸುಳ್ಳಿನ ಬಜೆಟ್‌ ಸಹ ಹೌದು.
–ಕೆ.ಎಂ.ಗಣೇಶ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಒಳ್ಳೆಯ ಬಜೆಟ್... ಆದರೆ...
ಒಳ್ಳೆಯ ಬಜೆಟ್‌ ಆಗಿದೆ. ಆದರೆ, ಈಗ ನೋಡಿರುವ ಹಾಗೆ ಕೊಡಗು ಜಿಲ್ಲೆಗೆ, ಕಾಫಿ ಬೆಳೆಗಾರರಿಗೆ ಅನುಕೂಲವಾಗುವಂತಹ ಯೋಜನೆಗಳು ಕಾಣಿಸಲಿಲ್ಲ. ಪಶ್ಚಿಮಘಟ್ಟಗಳಲ್ಲಿರುವ ರೈತರಿಗೆ ಬೇಕಾದ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಂತಹ, ಯುವಕರು ಉದ್ಯೋಗಕ್ಕಾಗಿ ಮನೆ ಬಿಟ್ಟು ಬೆಂಗಳೂರಿನತ್ತ ಮುಖ ಮಾಡುವುದನ್ನು ತಪ್ಪಿಸಲು ಹಾಗೂ ಜೋಶಿ ಮಠದಲ್ಲಿ ಸಂಭವಿಸಿದಂತಹ ಭೂಕುಸಿತ ತಡೆಯುವ ವಿಶೇಷ ಯೋಜನೆಗಳು ಬಜೆಟ್‌ನಲ್ಲಿ ಸಿಗಲಿಲ್ಲ. ಮುಂದಿನ ಉಳಿವಿಗೆ ಇವೆಲ್ಲವೂ ಮಾಡಬೇಕಿತ್ತು ಎಂಬುದು ನನ್ನ ಸಲಹೆ.
–ಎಂ.ಬಿ.ದೇವಯ್ಯ, ಅಧ್ಯಕ್ಷ, ಕೊಡಗು ಜಿಲ್ಲಾ ವಾಣಿಜ್ಯ ಸಂಸ್ಥೆ

ಸಮಾಧಾನ ತರಿಸಿದ ಬಜೆಟ್
ಆದಾಯ ತೆರಿಗೆ ವಿನಾಯಿತಿ ಎಲ್ಲರಿಗೂ ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಿರುವುದರಿಂದ ಅದರ ಫಲಗಳು ಕೊಡಗಿಗೂ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ, ಬಜೆಟ್ ಸಮಾಧಾನ ತರಿಸಿದೆ.
–ಬಿ.ಆರ್.ನಾಗೇಂದ್ರ ಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್‌, ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ

ಪ್ರಗತಿಗೆ ಪೂರಕ
ಮೇಲ್ನೋಟಕ್ಕೆ ನೋಡಿದರೆ ಈ ಬಜೆಟ್ ಜನಪ್ರಿಯತೆಯ ಕಡೆಗೆ ಗಮನ ಕೊಡಲಿಲ್ಲ. ನಮ್ಮೆಲ್ಲ ನಿರೀಕ್ಷೆಗಳು ಈಡೇರಿಲ್ಲ ಎಂಬ ಅಸಮಾಧಾನ ಇದ್ದರೂ ಇದು ದೇಶದ ಅರ್ಥವ್ಯವಸ್ಥೆಗೆ ಪೂರಕವಾದ ಬಜೆಟ್‌. ಕೃಷಿ ಕ್ಷೇತ್ರದಲ್ಲಿ ಬಡ್ಡಿ ದರ ಕಡಿಮೆ ಮಾಡದೇ ಹೆಚ್ಚು ಸಾಲ ಕೊಟ್ಟರೆ ಪ್ರಯೋಜನವಾಗುವುದಿಲ್ಲ. ಬಜೆಟ್‌ನ್ನು ಇನ್ನಷ್ಟು ವಿಸ್ತೃತವಾಗಿ ಅಧ್ಯಯನ ಮಾಡಬೇಕಿದೆ.
–ವಿಶ್ವನಾಥ್, ಕರ್ನಾಟಕ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.