ADVERTISEMENT

ಚೆನ್ನಂಗೊಲ್ಲಿಯಲ್ಲಿ ಸೆರೆಯಾಯಿತು ‘ವೇದ’

120ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿಯ ಇನ್ನಿಲ್ಲದ ಶ್ರಮದಿಂದ ಸೆರೆ ಸಿಕ್ಕ ಕಾಡಾನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 6:25 IST
Last Updated 16 ಫೆಬ್ರುವರಿ 2025, 6:25 IST
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಕಾಡಾನೆಗೆ ಸೆರೆಗೆ ಸಿದ್ಧವಾದ ಸಾಕಾನೆಗಳು
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಕಾಡಾನೆಗೆ ಸೆರೆಗೆ ಸಿದ್ಧವಾದ ಸಾಕಾನೆಗಳು   

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಚೆನ್ನಂಗೊಲ್ಲಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾಕಾನೆಗಳ ಅವಿರತ ಶ್ರಮದಿಂದ ಕಾಡಾನೆಯೊಂದು ಸೆರೆಯಾಯಿತು.

ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ನಂತರ, ಎಚ್ಚೆತ್ತ ಇಲಾಖೆ ಸೆರೆಗೆ ಕಾರ್ಯಾಚರಣೆ ನಡೆಸಿತು.

ಬೆಳಿಗ್ಗೆ 10 ಗಂಟೆ ವೇಳೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಹುಡುಕುತ್ತಾ ಹೊರಟರು. ಈ ವೇಳೆಯಲ್ಲಿ 43 ವರ್ಷ ವಯಸ್ಸಿನ ಗಂಡಾನೆ ದೇವರಕಾಡು ಅರಣ್ಯದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ವಿಶೇಷ ಕಾರ್ಯಾಚರಣೆ ತಂಡ ಸಾಕಾನೆಗಳ ಮೂಲಕ ಕಾಡಾನೆಯನ್ನು ಸುತ್ತುವರಿದರು. ಈ ವೇಳೆಯಲ್ಲಿ ಕಾರ್ಯಾಚರಣೆಗೆ ಬಳಸಿಕೊಂಡಿದ್ದ ಮತ್ತಿಗೋಡು, ಹಾರಂಗಿ ಮತ್ತು ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಭೀಮ, ಕಂಜನ್, ವಿಕ್ರಂ, ಪ್ರಶಾಂತ್, ಶ್ರೀಕಂಠ, ಈಶ್ವರ ಆನೆಗಳ ಮೂಲಕ ತೆರಳಿ ಕಾಡಾನೆಗೆ ಅರವಳಿಕೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿದರು.

ADVERTISEMENT

ಅರವಳಿಕೆ ತಜ್ಞ ಡಾ.ರಮೇಶ್, ಶಾರ್ಫ್ ಶೂಟರ್ ರಂಜನ್ ಅವರು ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾಡಾನೆ ಗೀಳುಡುತ್ತಾ ತುಸು ದೂರ ಓಡಿ ಹೊಗಿ ಪ್ರಜ್ಞೆ ತಪ್ಪಿ ಬಿದ್ದಿತು.

ಪ್ರಜ್ಞೆ ಬಂದ ಬಳಿಕ ಹೆಚ್ಚು ಪ್ರತಿರೋಧ ತೋರದ ಆನೆಯನ್ನು ಸಾಕಾನೆ ಮೂಲಕ ಬಂಧಿಸಿ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಸದ್ಯ, ಈ ಆನೆಗೆ ‘ವೇದ’ ಎಂಬ ಹೆಸರಿಡಲಾಗಿದೆ.

ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದ ಮನೆಯಪಂಡ ಕಾರ್ಯಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದ ಜಾನಕಿ ಎಂಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿ ಗ ಸಿಲುಕಿ ಮೃತಪಟ್ಟ ನಂತರ ಶಾಸಕ ಎ.ಎಸ್.ಪೊನ್ನಣ್ಣ ದೂರವಾಣಿ ಮೂಲಕ ಅರಣ್ಯ ಸಚಿವ ಈಶ್ವರಖಂಡ್ರೆ ಅವರೊಂದಿಗೆ ಮಾತನಾಡಿ ಆನೆ ಸೆರೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ನಂತರ, ಅನುಮತಿ ದೊರೆಯಿತು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕೊಡಗು ಜಿಲ್ಲಾ ಸಿಸಿಎಫ್ ಡಾ.ಮಾಲತಿ ಪ್ರಿಯ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಪರಿಸರವಾದಿ ತಮ್ಮಯ್ಯ, ಆರ್‌ಎಫ್‌ಒಗಳಾದ ದೇವರಾಜು, ಶಿವಶಂಕರ್, ಗಂಗಾಧರ್, ಹಿರಿಯ ವನ್ಯಜೀವಿ ವೈದ್ಯ ಚಿಟ್ಟಿಯಪ್ಪ, ಉಮಾಶಂಕರ್, ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆಯಲ್ಲಿ 120 ಮಂದಿ ವಿಶೇಷ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, 14 ಮಂದಿ ಮಾವುತರು ಹಾಗೂ ಕಾವಾಡಿಗಳು, 20 ಮಂದಿ ಡಿಆರ್‌ಎಫ್ ಗಳು ಪಾಲ್ಗೊಂಡಿದ್ದರು.

ಅರವಳಿಕೆ ಗುಂಡು ತಿಂದು ಪ್ರಜ್ಷೆ ತಪ್ಪಿ ಬಿದ್ದ ಆನೆಯನ್ನು ಬಂಧಿಸಲು ಮುದಾದ ಸಿಬ್ಬಂದಿಗಳು
ಸೆರೆಯಾದ ಕಾಡಾನೆ ವೇದ
ಸೆರೆಯಾದ ಕಾಡಾನೆ ವೇದ
ಆನೆ ಸೆರೆ ಹಿಡಿದ ಅರಣ್ಯಾಧಿಕಾರಿಗಳ ಹಾಗೂ ಇಲಾಖೆ ಸಿಬ್ಬಂದಿಗಳ ತಂಡ
ಸೆರೆಯಾದ ಬಳಿಕ ಲಾರಿ ಹತ್ತಿದ ಕಾಡಾನೆ

Highlights - ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆ 6 ಸಾಕಾನೆಗಳ ಬಳಕೆ ಸೆರೆಯಾದ ಕಾಡಾನೆ ದುಬಾರೆಗೆ ರವಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.