ADVERTISEMENT

ನಾಪೋಕ್ಲು | ಕಾಡಾನೆಗಳ ಉಪಟಳ: ಗ್ರಾಮಸ್ಥರು ಹೈರಾಣು

ಕೊಳಕೇರಿ, ಕುಂಜಿಲ, ಕೈಕಾಡು ಗ್ರಾಮಗಳಲ್ಲಿ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 6:16 IST
Last Updated 3 ಜುಲೈ 2025, 6:16 IST
ನಾಪೋಕ್ಲು  ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ತೋಟಗಳಲ್ಲಿ ಕಾಡಾನೆಗಳು ಅಡ್ಡಾಡುತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವುದು.
ನಾಪೋಕ್ಲು  ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ತೋಟಗಳಲ್ಲಿ ಕಾಡಾನೆಗಳು ಅಡ್ಡಾಡುತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವುದು.   

ನಾಪೋಕ್ಲು: ಸಮೀಪದ ಕೊಳಕೇರಿ, ಕುಂಜಿಲ, ಕೈಕಾಡು ಮುಂತಾದ ಗ್ರಾಮಗಳಲ್ಲಿ ಕಾಡಾನೆಗಳು ನುಗ್ಗಿ ಬೆಳೆಗಳನ್ನು ಧ್ವಂಸ ಮಾಡಿವೆ.

ಒಂದೆಡೆ ಸುರಿಯುತ್ತಿರುವ ಮಳೆ, ಮತ್ತೊಂದೆಡೆ ತೋಟಗಳಲ್ಲಿ ಗಿಡಗಳನ್ನು ಮುರಿದು ಧ್ವಂಸಗೊಳಿಸುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟ ಅನುಭವಿಸಬೇಕಿದೆ.

ತೋಟಗಳಿಗೆ ಕಾಡಾನೆಗಳು ನುಗ್ಗದಂತೆ ಗ್ರಾಮಸ್ಥರಯ ಪಟಾಕಿ ಸಿಡಿಸಿದರು. ಎರಡು ದಿನಗಳಿಂದ ಸಂಕಷ್ಟ ಅನುಭವಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸಪಟ್ಟರು. ಸುರಿಯುವ ಮಳೆ ಕಾರ್ಯಾಚರಣೆಗೆ ಅಡ್ಡಿಯಾಯಿತು.

ADVERTISEMENT

ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ತೋಟಗಳಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ದಾಂಧಲೆ ನಡೆಸಿ ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿದ್ದು, ರೈತರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಒಂದು ಮರಿಯಾನೆ ಸೇರಿದಂತೆ ಒಂಬತ್ತು ಕಾಡಾನೆಗಳು ಸುತ್ತಮುತ್ತಲು ಅಡ್ಡಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿ ಕಾಳೇಗೌಡ, ಅರಣ್ಯ ರಕ್ಷಕ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರೂ ಸಫಲರಾಗಿಲ್ಲ.

ಗ್ರಾಮದ ಅಚ್ಚಾಂಡಿರ, ಪುಲ್ಲೇರ, ಬಿದ್ದಾಟಂಡ, ಅಚ್ಚಪಂಡ, ಮಲೆಯಂಡ ಕುಟುಂಬಸ್ಥರ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿವೆ. ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಮಾಡಿವೆ.

‘ಈಚೆಗೆ ಪೇರೂರು, ಪಂದೇಟು, ಪುಲಿಕೋಟು, ನೆಲಜಿ ಗ್ರಾಮಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದವು. ಇದೀಗ ಕುಂಜಿಲ, ಕೊಳಕೇರಿ ಗ್ರಾಮಗಳಲ್ಲಿ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಆನೆ-ಮಾನವ ಸಂಘರ್ಷ ಈ ಭಾಗದಲ್ಲಿ ನಿರಂತರವಾಗಿದ್ದು, ಭತ್ತದ ಬೇಸಾಯ ಮಾಡಲೂ ಹಿಂದೇಟು ಹಾಕುವಂತಾಗಿದೆ’ ಎಂದು ಬೊಮ್ಮಂಜಕೇರಿಯ ಬೆಳೆಗಾರ ಅಶೋಕ್ ಹೇಳಿದರು.

ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್ಒಗಳಾದ ಫಿರೋಜ್ ಖಾನ್, ದಿಲೀಪ್ ಬೀಟ್ ಫಾರೆಸ್ಟ್ ಶರತ್ ಸೇರಿದಂತೆ 15 ಸಿಬ್ಬಂದಿ ಭಾಗವಹಿಸಿದ್ದರು.

ನಾಪೋಕ್ಲು  ಸಮೀಪದ ಕುಂಜಿಲ ಗ್ರಾಮದ ಸುಬ್ರಾಯ ಭಟ್ ಅವರ ತೋಟದಲ್ಲಿನ ಬಾಳೆಗಿಡಗಳನ್ನು ಕಾಡಾನೆಗಳು ಧ್ವಂಸ ಮಾಡಿರುವುದು.

ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹ

ಕುಂಜಿಲ ಗ್ರಾಮದ ಸುಬ್ರಾಯ ಭಟ್ ಹಾಗೂ ಬೊಮ್ಮಂಜಕೇರಿಯ ಅಶೋಕ್ ಮಾತನಾಡಿ ‘ಕಾಡಾನೆಗಳ ದಾಂಧಲೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಕಾಡಾನೆಗಳನ್ನು ಒಂದು ಭಾಗದಿಂದ ಓಡಿಸಿದರೆ ಮತ್ತೊಂದು ಭಾಗದಿಂದ ನುಸುಳುತ್ತವೆ. ಆ ಭಾಗದ ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಮೂಲಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.