ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮುಂಗಾರು ಮಳೆ ಆರ್ಭಟಿಸಿದೆ.
ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯು ಬುಧವಾರ ಬೆಳಿಗ್ಗೆಯೂ ಮುಂದುವರೆಯಿತು. ನಿರಂತರವಾಗಿ ಸುರಿದ ಭಾರಿ ಮಳೆಗೆ ನದಿತೊರೆಗಳು ಸೇರಿದಂತೆ ಸಮೀಪದ ಕದನೂರು ಹೊಳೆ ಹಾಗೂ ಭೇತ್ರಿಯಲ್ಲಿ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂತು. ನಿರಂತವಾಗಿ ಸುರಿದ ಮಳೆಯಿಂದಾಗಿ ಸಂತೆ ದಿನವಾದ ಬುಧವಾರ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡು, ಜನ ಪರದಾಡುವಂತಾಯಿತು.
ಮಂಗಳವಾರ ರಾತ್ರಿಯಿಂದಲೇ ಭಾರಿ ಮಳೆ ಸುರಿಯುತ್ತಿದ್ದರೂ ಅಧಿಕಾರಿಗಳು ತಾಲ್ಲೂಕಿನ ಶಾಲೆಗಳಿಗೆ ಬುಧವಾರ ಬೆಳಿಗ್ಗೆ 8ರ ಬಳಿಕ ರಜೆ ಘೋಷಿಸಿದರು. ತಡವಾಗಿ ರಜೆ ಘೋಷಿಸಿದ್ದರಿಂದ ಇಲಾಖೆಯ ಅಧಿಕಾರಿಗಳ ವಿರುದ್ಧ ಜನರು ಅಸಮಧಾನ ವ್ಯಕ್ತಪಡಿಸಿದರು.
ಭಾರಿ ಮಳೆಯಿಂದಾಗಿ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಶಾಲೆಗಳಿಗೆ ಬಿಇಒ ಬೇಗನೆ ರಜೆ ಘೋಷಿಸಿದ್ದರೂ, ಆದರೆ ವಿರಾಜಪೇಟೆ ತಾಲ್ಲೂಕಿನ ಶಾಲೆಗಳಿಗೆ ತಡವಾಗಿ ರಜೆ ಘೋಷಣೆ ಮಾಡಿದ್ದರಿಂದ ದೂರದ ಪ್ರದೇಶದಿಂದ ಬರುವ ಬಹುತೇಕ ವಿದ್ಯಾರ್ಥಿಗಳು ಅದಾಗಲೇ ಮನೆಯಿಂದ ಶಾಲೆಗೆ ಹೊರಟಾಗಿತ್ತು. ಮನೆಯಿಂದ ಶಾಲೆಯ ಕಡೆ ಆಗಮಿಸಿದ ಮಕ್ಕಳಿಗೆ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಕೆಲ ಶಾಲೆಗಳಲ್ಲಿ ತರಗತಿಗಳು ನಡೆದರೆ, ಕೆಲ ಶಾಲೆಗಳು ರಜೆ ಘೋಷಿಸಿದ್ದವು. ಇದರಿಂದ ಶಾಲಾ ಮಕ್ಕಳಿಗೆ ಗೊಂದಲವುಂಟಾಗಿ ಪರದಾಡುವಂತಾಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ಮಧ್ಯಾಹ್ನದ ವೇಳೆಗೆ ಕೊಂಚ ಮಟ್ಟಿಗೆ ಇಳಿಮುಖಗೊಂಡಿದ್ದ ಮಳೆಯ ರಭಸ ಮಧ್ಯಾಹ್ನದ ಬಳಿಕೆ ಮತ್ತೆ ಆರ್ಭಟಿಸತೊಡಗಿತು.
ಸಮೀಪದ ಆರ್ಜಿ, ಬೇಟೋಳಿ, ಹೆಗ್ಗಳ, ಬಿಟ್ಟಂಗಾಲ, ಕದನೂರು, ಕಾಕೋಟುಪರಂಬು, ಕಡಂಗ, ಕೆದಮುಳ್ಳೂರು, ಒಂಟಿಯಂಗಡಿ, ಚೆಂಬೆಬೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.