ವಿರಾಜಪೇಟೆ: ತಾಲ್ಲೂಕಿನ ಕೆ ಬೈಗೋಡು ಗ್ರಾಮದ ಪೈಸಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ನೆಲೆಸಿದ್ದ ಪರಿಶಿಷ್ಟ ಪಂಗಡದವರನ್ನು ತೆರವುಗೊಳಿಸಿದನ್ನು ಖಂಡಿಸಿ ದಸಂಸ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಗ್ರಾಮದ ಪೈಸಾರಿ ಸರ್ವೆ ಸಂ 328/1ಪಿ1 ರಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದ ಪರಿಶಿಷ್ಟ ಪಂಗಡದ ಕುಟುಂಬಗಳನ್ನು ತೆರವುಗೊಳಿಸಿದ ತಾಲ್ಲೂಕು ಆಡಳಿತದ ಕ್ರಮವನ್ನು ಖಂಡಿಸಿ ಪ್ರತಿಭಟನಕಾರರು ಪಟ್ಟಣದ ದೊಡ್ಡಟ್ಟಿ ಚೌಕಿಯಿಂದ ಮಿನಿವಿಧಾನ ಸೌಧದವರೆಗೆ ಮೊದಲು ಮೆರವಣಿಗೆ ನಡೆಸಿದರು. ಬಳಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅನಂತಶಂಕರ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಸಂದ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ‘ಪ್ರತಿ ಕುಟುಂಬಕ್ಕೆ ನಿವೇಶನ ಒದಗಿಸುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇದರ ವಿಚಾರಣೆ ಜು.19 ರಂದು ನಡೆಯಲಿದೆ. ಜೊತೆಗೆ ಕೇವಿಯಟ್ ಸಹ ಇದೆ. ಹೀಗಿರುವಾಗ ಜುಲೈ 3ರ ಸಂಜೆ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಏಕಾಏಕಿ ಶೆಡ್‌ಗಳನ್ನು ತೆರವುಗೊಳಿಸಿ, ಅಲ್ಲಿದ್ದ ಕುಟುಂಬಗಳನ್ನು ಬೀದಿಪಾಲು ಮಾಡಿದ್ದು ಖಂಡನೀಯ. ಆದ್ದರಿಂದ 15 ದಿನದೊಳಗೆ ಇದೇ ಜಾಗದಲ್ಲಿ ಆ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ’ ಎಂದರು.
‘ಪ್ರಸಕ್ತ ಜಾಗದ ಆರ್.ಟಿ.ಸಿಯಲ್ಲಿ ಪೈಸಾರಿ ಎಂದು ನಮೂದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಾಗಿದೆ ಎಂದು ತೋರಿಸಲಾಗಿದೆ. ಇಲ್ಲಿನ 23 ಎಕರೆ ಜಾಗವು ಗೋಮಾಳವೆಂಬುದು ತಹಶೀಲ್ದಾರ್ ಅಭಿಪ್ರಾಯವಾಗಿದೆ. ಆದರೆ ಇದರಲ್ಲಿ ಕಾಫಿ ತೋಟದ ಮಾಲೀಕರು ಜಾಗ ಒತ್ತುವರಿ ಮಾಡಿದ್ದಾರೆ. ಅಲ್ಲದೆ 21 ಮನೆಗಳಿಗೆ ಈಗಾಗಲೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಇದೀಗ ಪರಿಶಿಷ್ಟ ಪಂಗಡದ ಬಡಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿದಾಗ ಅದನ್ನು ಮಾತ್ರ ಬಲವಂತವಾಗಿ ತೆರವುಗೊಳಿಸುವ ಔಚಿತ್ಯ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
‘ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯ ನಿಟ್ಟೂರು ಗ್ರಾಮದ ಪೌತಿ ಪಂಜರಿ ಯರವರ ಕುರುಮ ಎಂಬುವವರ ಹೆಸರಿನಲ್ಲಿ 2.60 ಸೇಂಟ್ ಜಾಗವಿದ್ದು, ಅದನ್ನು ಕೆಲವರು ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಈ ಕುರಿತು ಕುರುಮ ಅವರ ಮೊಮ್ಮಗಳಾದ ಬೇಬಿ ಮತ್ತಿತರರು ಹದ್ದುಬಸ್ತು ಸರ್ವೆ ನಡೆಸಿ ಕೊಡುವಂತೆ ಅರ್ಜಿ ಸಲ್ಲಿಸಿದರೂ ಪೊನ್ನಂಪೇಟೆ ತಹಶೀಲ್ದಾರ್ ಸ್ಪಂದಿಸುತ್ತಿಲ್ಲ.
ಪೊನ್ನಂಪೇಟೆ ತಾಲ್ಲೂಕಿನ ಬಾಳಲೆ ಹೋಬಳಿಯಲ್ಲಿ 2018-19ರ ಸಾಲಿನಲ್ಲಿ ತಹಶೀಲ್ದಾರ್ 30x40ರ ಅಳತೆಯ ಸುಮಾರು 25 ನಿವೇಶನಗಳ ಹಕ್ಕು ಪತ್ರಗಳನ್ನು ನೀಡಿದ್ದರು. ಆದರೆ ಫಲಾನುಭವಿಗಳು ಕಾರಣಾಂತರದಿಂದ ತಕ್ಷಣ ಮನೆ ನಿರ್ಮಿಸಲು ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಹೋದಾಗ ಬೇರೆಯವರು ಆ ಜಾಗವನ್ನು ಒತ್ತುವರಿ ಮಾಡಿ ಕಾಫಿ ತೋಟ ಮಾಡಿರುವುದು ಕಂಡು ಬಂದಿದೆ. ಒತ್ತುವರಿಯನ್ನು ತೆರವು ಮಾಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು 15 ದಿನಗಳಲ್ಲಿ ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಅನಂತ ಶಂಕರ್, ‘ತಾಲ್ಲೂಕಿನ ಬಿ.ಶೆಟ್ಟಿಗೇರಿಯಲ್ಲಿ 11 ಎಕರೆ ಜಾಗವನ್ನು ನಿವೇಶ ರಹಿತರಿಗೆ ಮಂಜೂರು ಮಾಡಲಾಗಿದೆ. ಆದರೆ ಕೆ. ಬೈಗೋಡುವಿನ ಜಾಗವು ಗೋಮಾಳ ಆಗಿರುವುದರಿಂದ ಒತ್ತುವರಿ ತೆರವು ಮಾಡಲಾಗಿದೆ’ ಎಂದರು.
‘ಈ ಕುರಿತು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅರೆ ಬೆತ್ತಲೆಯಾಗಿ ಅಮರಣಾಂತ ಉಪವಾಸ ಮುಷ್ಕರ ಹಾಗೂ ರಸ್ತೆ ತಡೆಯಂತಹ ಉಗ್ರ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಪರಶುರಾಮ್ ಎಚ್ಚರಿಸಿದ್ದಾರೆ.
ದಸಂಸದ ತಾಲ್ಲೂಕು ಸಂಘಟನ ಸಂಚಾಲಕ ರಾಮು, ಕರಿಯ, ಅಪ್ಪಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.