ADVERTISEMENT

ವಿಪಿಎಲ್ : ಆಟಗಾರರ ಹರಾಜು ಪ್ರಕ್ರಿಯೆ

ವಿರಾಜಪೇಟೆ : ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಡಿ.24 ರಿಂದ ನಡೆಯಲಿರುವ ಟೂರ್ನಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 13:12 IST
Last Updated 19 ನವೆಂಬರ್ 2019, 13:12 IST
ವಿರಾಜಪೇಟೆ ಸಮೀಪದ ಪೆರುಂಬಾಡಿಯ ಖಾಸಗಿ ರೆಸಾರ್ಟ್‌ನಲ್ಲಿ ವಿಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಈಚೆಗೆ ನಡೆಯಿತು
ವಿರಾಜಪೇಟೆ ಸಮೀಪದ ಪೆರುಂಬಾಡಿಯ ಖಾಸಗಿ ರೆಸಾರ್ಟ್‌ನಲ್ಲಿ ವಿಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಈಚೆಗೆ ನಡೆಯಿತು   

ವಿರಾಜಪೇಟೆ : ಪಟ್ಟಣದಲ್ಲಿ ನಡೆಯಲಿರುವ ಐಪಿಎಲ್ ಮಾದರಿಯ 2ನೇ ವರ್ಷದ ವಿಪಿಎಲ್ ಕ್ರಿಕೆಟ್ ಟೂರ್ನಿಯ ಹಿನ್ನಲೆಯಲ್ಲಿ ಈಚೆಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.

ಪಟ್ಟಣದ ಯೂತ್ ಫ್ರೆಂಡ್ಸ್ ವತಿಯಿಂದ ಡಿ.24 ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಆಟಗಾರರ ಹರಾಜು ಸಮೀಪದ ಪೆರುಂಬಾಡಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಿತು.

ಬಿಜೆಪಿ ಮುಖಂಡ ಜೋಕಿಂ ರಾಡ್ರಿಗಸ್ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಹರಾಜು ಪ್ರಕ್ರಿಯೆಯ ಮೂಲಕ ಸುಮಾರು 160 ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡರು. ವಿರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸುಮಾರು 220ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ಲಭ್ಯವಿದ್ದರು.

ADVERTISEMENT

ವಿರಾಜಪೇಟೆಯ ಕ್ರಿಕೆಟ್ ಹಬ್ಬ ಎಂದೇ ಮನೆಮಾತಾಗಿರುವ ವಿಪಿಎಲ್ ಟೂರ್ನಿಯು ಕಳೆದ ಬಾರಿಯಂತೆ ಈ ಬಾರಿಯು ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಡಿ.24 ರಿಂದ 6 ದಿನಗಳ ಕಾಲ ನಡೆಯಲಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯಲ್ಲಿ 10 ತಂಡಗಳು ಭಾಗವಹಿಸಿದ್ದರೆ, ಈ ಬಾರಿ 2 ತಂಡಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಹೀಗಾಗಿ, ಈ ಬಾರಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಎಂ.ವೈ.ಸಿ.ಸಿ, ಕಿಂಗ್‌ಫಿಷರ್, ಮನ್ನಾ ಸೂಪರ್ ಕಿಂಗ್ಸ್, ರಾಯಲ್ ರಜತಾದ್ರಿಸ್, ಆದ್ಯಾ ಕ್ರಿಕೆಟರ್ಸ್, ಸ್ಪೈಸಿಸ್ ಇಲವೆನ್, ಟೀಂ ಮಹಾಮೇಳ, ಟೀಂ ಸ್ಪಿರಿಟ್ಸ್, ಲಿತಿನ್ ಕ್ರಿಕೆಟರ್ಸ್, ಕೌ ಬಾಯ್ಸ್, ರಾಯಲ್ ಫ್ರೆಂಡ್ಸ್ ಮತ್ತು ರೀಶೆಫ್ ಚಾಲೆಂಜರ್ಸ್ ತಂಡಗಳ ಮಾಲೀಕರು ಹಾಗೂ ಐಕಾನ್ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ನೆಚ್ಚಿನ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡರು.

ಡಿ.29 ರಂದು ನಡೆಯುವ ಅಂತಿಮ ಪಂದ್ಯಕ್ಕೆ ಬಹುಭಾಷಾ ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಇಮ್ತಿಯಾಜ್, ನಿತಿನ್, ಶವಾಜ್ ಮತ್ತು ಅಭಿಲಾಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.