ADVERTISEMENT

ಕುವೈತ್‌ನಲ್ಲಿ ಸಿಲುಕಿದ್ದ ವಿರಾಜಪೇಟೆ ಮಹಿಳೆ ವಾಪಸ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 10:42 IST
Last Updated 1 ಫೆಬ್ರುವರಿ 2023, 10:42 IST
   

ಮಡಿಕೇರಿ: ಕುವೈತ್‌ನಲ್ಲಿ ಸಿಲುಕಿದ್ದ ಇಲ್ಲಿನ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ನಿವಾಸಿ ಪಾರ್ವತಿ ಅವರನ್ನು ಜಿಲ್ಲಾಡಳಿತ ಸುರಕ್ಷಿತವಾಗಿ ವಾಪಸ್ ಕರೆ ತರುವಲ್ಲಿ ಯಶಸ್ವಿಯಾಗಿದೆ.

ಏಜೆಂಟ್‌ರ ಮೂಲಕ ಕೆಲಸಕ್ಕೆಂದು ಕುವೈತ್‌ಗೆ ಹೋಗಿದ್ದ ಮಹಿಳೆಗೆ ಅಲ್ಲಿ ಉದ್ಯೋಗ ಸಿಗದೇ ಪರದಾಡಿದ್ದರು. ಜಿಲ್ಲಾಡಳಿತಕ್ಕೆ ದೂರು ನೀಡಿದ ಬೆನ್ನಲ್ಲೆ ಸ್ಪಂದಿಸಿದ ಅಧಿಕಾರಿಗಳು ಅವರೊಂದಿಗೆ ಸಂಪರ್ಕ ಸಾಧಿಸಿ, ರಾಯಭಾರ ಕಚೇರಿಯೊಂದಿಗೆ ವ್ಯವಹರಿಸಿ, ಕೊನೆಗೂ ಭಾರತಕ್ಕೆ ಕರೆ ತಂದರು.

ಏನಿದು ಪ್ರಕರಣ?: ಇಲ್ಲಿನ ಕರಡಿಗೋಡು ಗ್ರಾಮದ ಪಾರ್ವತಿ ಎಂಬ ಮಹಿಳೆಯು 3 ವರ್ಷಗಳಿಂದ ಕೇರಳದ ತಲಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಮಹಿಳೆಯೊಬ್ಬರು ತಮಿಳುನಾಡಿನ ಊಟಿಯ ಏಜೆಂಟ್‌ ಒಬ್ಬರ ಮೂಲಕ ಹೆಚ್ಚಿನ ಸಂಬಳದ ಕೆಲಸ ಕೊಡಿಸುವ ಆಮಿಷ ಒಡ್ಡಿ ಪಾರ್ವತಿಯನ್ನು ಕುವೈತ್‌ಗೆ 3 ತಿಂಗಳ ಹಿಂದೆಯಷ್ಟೇ ಕಳುಹಿಸಿದರು. ಆದರೆ, ಅದು ಪ್ರವಾಸಿ ವೀಸಾ ಎಂಬುದು ಪಾರ್ವತಿಗೆ ತಿಳಿಯಲಿಲ್ಲ. ತನಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಕೆಲಸವೂ ಇಲ್ಲ, ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದಾರೆ ಎಂದು ಆಕೆ ತನ್ನ ತಾಯಿಗೆ ತಿಳಿಸಿದ್ದಾರೆ. ಕೂಡಲೇ ಅವರು ವಿಷಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಗಮನಕ್ಕೆ ತಂದಿದ್ದಾರೆ. ಪ‍ರಿಶೀಲಿಸಿದಾಗ ಮಹಿಳೆ ತೆರಳಿರುವುದು 3 ತಿಂಗಳ ಪ್ರವಾಸಿ ವೀಸಾ ಎಂಬುದು ಗೊತ್ತಾಗಿದೆ. ನಂತರ ಜಿಲ್ಲಾಡಳಿತ ಅವರನ್ನು ವಾಪಸ್ ಕರೆ ತಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.