ADVERTISEMENT

ದ್ವೇಷ ಅಸೂಯೆ ತೊರೆದು, ಕೊಡವ ಸಂಸ್ಕೃತಿ ಉಳಿಸಲು ಕರೆ 

ವಿರಾಜಪೇಟೆ: ಅಂತರ ಕೊಡವಕೇರಿ ಮೇಳ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:45 IST
Last Updated 5 ನವೆಂಬರ್ 2019, 14:45 IST
ವಿರಾಜಪೇಟೆಯ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಅಂತರ ಕೊಡವಕೇರಿ ಮೇಳಕ್ಕೆ ವಿಧಾನಪರಿಷತ್ತಿನ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಚಾಲನೆ ನೀಡಿದರು
ವಿರಾಜಪೇಟೆಯ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಅಂತರ ಕೊಡವಕೇರಿ ಮೇಳಕ್ಕೆ ವಿಧಾನಪರಿಷತ್ತಿನ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಚಾಲನೆ ನೀಡಿದರು   

ವಿರಾಜಪೇಟೆ: ಬೇರೆ ಜನಾಂಗಗಳನ್ನು ದೂಷಿಸದೆ, ನಮ್ಮ ಜನಾಂಗವನ್ನು ಪ್ರೀತಿಸಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ವಿಧಾನಪರಿಷತ್ತಿನ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.

ಪಟ್ಟಣದ ಕೊಡವ ಸಮಾಜದ ಸಭಾಂಗಣದಲ್ಲಿ ಪಂಜರಪೇಟೆ ಕೊಡವ ಕೇರಿಯ ಮುಂದಾಳತ್ವದಲ್ಲಿ ಏಳು ಕೇರಿಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ’ಅಂತರಕೇರಿ ಕೊಡವ ಮೇಳ‘ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದ್ವೇಷ ಅಸೂಯೆಯನ್ನು ಮುಂದುವರೆಸಿಕೊಳ್ಳದೆ ಕೊಡವಾಮೆಯನ್ನು ಉಳಿಸಿಕೊಳ್ಳಬೇಕು. ಮುಂದಿನ ತಲೆಮಾರಿಗೆ ಕೊಡವರ ಆಚಾರ, ವಿಚಾರ, ಪದ್ಧತಿ, ಪರಂಪರೆ, ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸಿ ಪರಿಚಯಿಸಲು ಕೊಡವ ಮೇಳಗಳು ವೇದಿಕೆಯಾಗುತ್ತದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೋವಿಯ ವಿಚಾರದಲ್ಲಿ ಬೇರೆ ಜನಾಂಗ ಹೊಟ್ಟೆಕಿಚ್ಚು ಪಡುವ ಅವಶ್ಯಕತೆ ಇಲ್ಲ. ಕೋವಿ ಹಕ್ಕು ನಮ್ಮ ಸಂಸ್ಕೃತಿಯ ಪ್ರತೀಕ. ಮೊದಲು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಭೂಲೋಕದ ಸ್ವರ್ಗವಾಗಿರುವ ಜಿಲ್ಲೆಯಲ್ಲಿ ಹುಟ್ಟಿರುವ ನಾವು ಧನ್ಯರು. ಕೊಡವ ಸಂಸ್ಕೃತಿ ಭಾಷೆ ಉಳಿಯಬೇಕಾದರೆ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಸಿದರು.

ADVERTISEMENT

ನಾಪೋಕ್ಲು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ ಮಾತನಾಡಿ, ಮಕ್ಕಳಿಗೆ ಕೊಡವರ ಆಚಾರ ವಿಚಾರ ಸಂಸ್ಕೃತಿಯನ್ನು ಪ್ರಾಥಮಿಕ ಹಂತದಿಂದಲೇ ಕಲಿಸಬೇಕು. ಜನಾಂಗದ ಸಂಸ್ಕೃತಿ ಹಬ್ಬ ಹರಿದಿನಗಳನ್ನು ಅನ್ಯರಿಗೂ ಪರಿಚಯಿಸುವ ಕೆಲಸವಾಗಬೇಕು. ಮನೆಯಲ್ಲಿ ಪೋಷಕರು ಮಕ್ಕಳೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಕೊಡವ ಭಾಷೆಯನ್ನು ಮಾತನಾಡಿದರೆ ಕೊಡವ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಯಡ ವಾಸು ನಂಜಪ್ಪ (ಕ್ರೀಡೆ), ಮೇರಿಯಂಡ ಕೆ ಪೂವಯ್ಯ (ಸಮಾಜ ಸೇವೆ), ಡಾ ಪಾಲೆಕಂಡ ಕೆ ಉತ್ತಪ್ಪ (ವೈದ್ಯಕೀಯ), ನಾಯಕಂಡ ಬೇಬಿ ಚಿಣ್ಣಪ್ಪ (ಸಾಹಿತ್ಯ), ಚೇಮಿರ ಎಂ ಭೀಮಯ್ಯ (ಶಿಕ್ಷಣ), ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ (ಸಾಹಿತ್ಯ) ಹಾಗೂ ಮಾಳೇಟಿರ ಶ್ರೀನಿವಾಸ್ (ನಿರೂಪಣೆ) ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾದಂಡ ಎಸ್ ಪೂವಯ್ಯ, ಅಮ್ಮಣಿಚಂಡ ರಾಜಾ ನಂಜಪ್ಪ, ಬೊಳ್ಳಂಡ ಈಶ್ವರಿ ಅಯ್ಯಪ್ಪ ಉಪಸ್ಥಿತರಿದ್ದರು. ಪಂಜರುಪೇಟೆ ಕೊಡವಕೇರಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಟ್ಟನದ ಮಲೆತಿರಿಕೆ ಈಶ್ವರ ಕೊಡವ ಸಂಘ, ಇಗ್ಗುತಪ್ಪ ಕೊಡವ ಸಂಘ, ಗಾಂಧಿನಗರದ ಕೊಡವ ಒಕ್ಕೂಟ, ಕಾವೇರಿ ಕೊಡವಕೇರಿ, ಚಿಕ್ಕಪೇಟೆ ಕೊಡವಕೇರಿ, ಕದನೂರು ಕೊಟ್ಟೋಳಿ ಕೊಡವ ಸಂಘ ಸೇರಿದ್ದು ಕೊಡವ ಕೇರಿ ಮೇಳಕ್ಕೆ ವೀರಾಜಪೇಟೆಯ ಅಖಿಲ ಕೊಡವ ಸಮಾಜ, ಕೊಡವ ಸಮಾಜ ಹಾಗೂ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಆಶ್ರಯದಲ್ಲಿ ಕೊಡವ ಕೇರಿ ಮೇಳ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.