ADVERTISEMENT

ಅಂಗವಿಕಲರ ಸ್ಥಿತಿಗತಿ ಅಧ್ಯಯನ: ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 8:45 IST
Last Updated 20 ಅಕ್ಟೋಬರ್ 2011, 8:45 IST

ಕೋಲಾರ: ಜಿಲ್ಲೆಯ ಅಂಗವಿಕಲರ ಸ್ಥಿತಿಗತಿಯ ಸಮಗ್ರ ಅಧ್ಯಯನ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ವಯಂ ಸೇವಕರ ಮೂಲಕ ಸಮೀಕ್ಷೆ ನಡೆಸಬೇಕು ಎಂದು ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ರಾಜಣ್ಣ ಸೂಚಿಸಿದರು.

ಅಂಗವಿಕಲರಿಗೆ ಮೀಸಲಾಗಿರುವ ಶೇ.3ರ ಅನುದಾನ ಬಳಕೆ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಸೂಚನೆ ನೀಡಿದರು.

ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಅಂಗವಿಕಲರಿಗೆ ನಿಗದಿಪಡಿಸಿರುವ ಆಯವ್ಯಯದ ಶೇ.3ರಷ್ಟು ಹಣವನ್ನು ಅವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ವೈದ್ಯಕೀಯ ಪುನರ್‌ವಸತಿ ಕಾರ್ಯಗಳಿಗೆ ಮೀಸಲಿಟ್ಟು ಮುಖ್ಯವಾಹಿನಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅಂಗವಿಕಲರ ಸಮೀಕ್ಷೆ ನಡೆಸಬೇಕು ಎಂದರು.

ಅಂಗವಿಕಲರ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಕ್ಕೆ ಅಧಿಕಾರಿಗಳೇ ಕಾರಣ. ಈ ನಿಟ್ಟಿನಲ್ಲಿ ಇನ್ನು ಮುಂದೆ ಕಾಳಜಿ ವಹಿಸಬೇಕು. ಉಲ್ಲಂಘನೆ ಪ್ರಕರಣ ಕಂಡು ಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುವ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ರೂ.56 ಲಕ್ಷ ಮೀಸಲಿಡಲಾಗಿದೆ. ಅದನ್ನು ಸ್ವಯಂಸೇವಕರಿಗೆ ಗೌರವಧನ ನೀಡಲು ಬಳಸಬಹುದು. ಒಟ್ಟಾರೆ ಅಂಗವಿಕಲರ ಕಲ್ಯಾಣಕ್ಕೆ ಸದ್ವಿನಿಯೋಗ ಮಾಡಬೇಕು ಎಂದರು.

ಪಿಂಚಣಿಗಾಗಿ ಅಂಗವಿಕಲ ಪಲಾನುಭವಿಗಳನ್ನು ಗುರುತಿಸಲು ನಿಯೋಜನೆಗೊಂಡಿರುವ ಸ್ವಯಂಸೇವಕರಿಗೆ ನೀಡಲಾಗುತ್ತಿರುವ ಗೌರವ ಧನ ರೂ.1.5 ಸಾವಿರ ಸಾಕಾಗುತ್ತಿಲ್ಲ ಎಂಬ ಬೇಡಿಕೆ ಕೇಳಿಬಂದಿರುವ ಹಿನ್ನೆಲೆಯಲ್ಲಿ, 2 ಸಾವಿರಕ್ಕೆ ಹೆಚ್ಚಿಸಿ ಕ್ರಮ ಕೈಗೊಳ್ಳಿ ಎಂದು ಅವರು ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎನ್.ಶಾಂತಪ್ಪ, ಮುಖ್ಯ ಲೆಕ್ಕಾಧಿಕಾರಿ ಗಂಗಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಿಮಲಾ, ಅಂಗವಿಕಲರ-ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ನಾಗಮಣಿ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಜಯಪ್ರಕಾಶ ಸಮುದ್ರೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.