ADVERTISEMENT

ಅಂತಿಮ ಕಣದಲ್ಲಿ ಉಳಿಯೋರು ಯಾರು ?

ನಾಮಪತ್ರ ವಾಪಸಿಗೆ ಇಂದು ಕೊನೇ ದಿನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 11:00 IST
Last Updated 20 ಏಪ್ರಿಲ್ 2013, 11:00 IST

ಕೋಲಾರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ಶನಿವಾರ ಕೊನೇ ದಿನ. ಇಡೀ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸುವವರೆಗೂ ಇದ್ದ ಒಂದು ಬಗೆಯ ಕುತೂಹಲದ ಘಟ್ಟ ಮುಗಿದಿದೆ. ಚುನಾವಣೆಯ ಹೊಸ ಅಧ್ಯಾಯಕ್ಕೆ ಶನಿವಾರ ಮುನ್ನುಡಿ ಬರೆಯಲಿದೆ.

ಪ್ರಮುಖ ಪಕ್ಷಗಳಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರು, ಹಲವು ಪಕ್ಷೇತರರು ನಾಮಪತ್ರಗಳನ್ನು ಶನಿವಾರ ವಾಪಸ್ ಪಡೆಯುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಮುಳಬಾಗಲು ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳು ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಸಿ.ವಿ.ಗೋಪಾಲ್ ಮತ್ತು ಆದಿನಾರಾಯಣ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಜಿ.ಮಂಜುನಾಥ್ ಕೂಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಮರೇಶ್ ಅವರಿಗೆ ಬಿಫಾರಂ ದೊರಕಿರುವ ಹಿನ್ನೆಲೆಯಲ್ಲಿ ಮಂಜುನಾಥ್ ಪಕ್ಷೇತರ ಅಭ್ಯರ್ಥಿಯಾಗಿಯೇ ಚುನಾವಣೆಯನ್ನು ಎದುರಿಸಲಿದ್ದಾರೆ. ಅವರ ಜಾತಿ ಪ್ರಮಾಣಪತ್ರದ ವಿವಾದ ಅಂತ್ಯಕಾಣದಿದ್ದರೂ, ನಾಮಪತ್ರ ಸ್ವೀಕೃತಗೊಂಡಿರುವುದು ಕ್ಷೇತ್ರದ ಬಂಡಾಯ ಕಾಂಗ್ರೆಸ್ಸಿಗರಲ್ಲಿ ಹೊಸ ಹುರುಪನ್ನು ತುಂಬಿದೆ.

ಅಮರೇಶ್ ಅವರ ವಿರುದ್ಧ ನ್ಯಾಯಾಲಯದಿಂದ ಶಿಕ್ಷೆ ಆದೇಶ ಹೊರಬಿದ್ದ ಬಳಿಕವೂ ಟಿಕೆಟ್ ನೀಡಿರುವ ಪಕ್ಷದ ನಿಲುವಿಗೆ ವ್ಯಕ್ತವಾಗಿರುವ ಖಂಡನೆ ಮುಂದುವರಿಯುತ್ತಿದೆ. ಅಮರೇಶ್ ಪರವಾಗಿ ಮತ ಕೇಳುವುದಾದರೂ ಹೇಗೆ ಎನ್ನುತ್ತಿದ್ದಾರೆ ಮುಖಂಡರು. ಅಷ್ಟೇ ಅಲ್ಲದೆ, ಅವರ ಬದಲಿಗೆ ಮಂಜುನಾಥ್ ಅವರನ್ನೇ ಗೆಲ್ಲಿಸಿಕೊಳ್ಳುತ್ತೇವೆ. ಪಕ್ಷದ ವಿವಿಧ ಸ್ಥಾನಗಳಿಂದ ತಮ್ಮನ್ನು ಉಚ್ಛಾಟಿಸುವ ಮುನ್ನ ತಾವೇ ರಾಜೀನಾಮೆಯನ್ನೂ ನೀಡುತ್ತೇವೆ ಎಂಬ ನಿರ್ಧಾರಾತ್ಮಕ ಮಾತುಗಳನ್ನೂ ಆಡಿದ್ದಾರೆ.

ಈ ನಿಟ್ಟಿನಲ್ಲಿ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಶನಿವಾರ ಮುಳಬಾಗಲು ಇನ್ನಷ್ಟು ಕುತೂಹಲದ ಕೇಂದ್ರವಾಗಲಿದೆ.
ಕೆಜಿಎಫ್‌ನ ಕಾಂಗ್ರೆಸ್ ಪಕ್ಷದಲ್ಲೂ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಇಬ್ಬರು ಸ್ಪರ್ಧಿಸಿದ್ದಾರೆ. ಅವರನ್ನೂ ಸಮಾಧಾನಗೊಳಿಸುವ ಜವಾಬ್ದಾರಿ ಪಕ್ಷದ ಪ್ರಮುಖರ ಮೇಲಿದೆ.

ಮಾಲೂರಿನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ವಿ.ನಾಗೇಶ್ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಶಾಸಕ ಎ.ನಾಗರಾಜು ಅವರು ಹೇಳಿದರೆ ಮಾತ್ರ ನಾಮಪತ್ರವನ್ನು ವಾಪಸು ಪಡೆಯುವುದಾಗಿ ಅವರು ಹೇಳಿದ್ದಾರೆ. ಶನಿವಾರ ಅವರು ನಾಮಪತ್ರ ವಾಪಸ್ ಪಡೆಯುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ನಡುವೆ, ಕೋಲಾರ, ಶ್ರೀನಿವಾಸಪುರ, ಮಾಲೂರು ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಮತ್ತು ಪಕ್ಷೇತರರಾದ ಗಣ್ಯ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.