ADVERTISEMENT

ಆಲೂಗಡ್ಡೆಗೆ ಅಂಗಮಾರಿ: ಪರಿಹಾರ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:48 IST
Last Updated 19 ಡಿಸೆಂಬರ್ 2012, 10:48 IST

ಕೋಲಾರ: ಜಿಲ್ಲೆಯಲ್ಲಿ ಅಂಗಮಾರಿ ರೋಗಕ್ಕೆ ತುತ್ತಾಗಿರುವ ಆಲೂಗಡ್ಡೆ ಬೆಳೆಗೆ ತೋಟಗಾರಿಕೆ ಇಲಾಖೆ ರೋಗದ ಲಕ್ಷಣ ಹಾಗೂ ಕೆಲ ಪರಿಹಾರ ತಿಳಿಸಿದೆ. ಗಿಡದ ಎಲೆಗಳ ತುದಿ ಕೆಳಭಾಗದಲ್ಲಿ ನೀರಿನಿಂದ ತೊಯ್ದ ಮಚ್ಚೆಗಳು ಕಂಡು ಬಂದು ಕ್ರಮೇಣ ಬಿಳಿ ಬೂಸ್ಟ್ ಬೆಳೆಯುತ್ತದೆ.

ಎಲೆ ಮೇಲ್ಭಾಗದಲ್ಲಿ ತಿಳಿಕೆಂಪು ಅಥವಾ ಕಪ್ಪು ಮಚ್ಚೆ ಕಾಣಿಸಿಕೊಳ್ಳುತ್ತವೆ. ಎಲೆಗಳು ಕಪ್ಪಾಗಿ ಜೋತು ಬೀಳುತ್ತವೆ. ನಿರಂತರವಾಗಿ 10 ದಿನದವರೆಗೆ ಉಷ್ಣಾಂಶ 8-10 ಡಿಗ್ರಿ ಸೆಲ್ಸಿಯಸ್ ಇದ್ದರೆ ರೋಗದ ಬಾಧೆ ಹೆಚ್ಚುತ್ತದೆ.

ಬೀಜೋಪಚಾರ: ರೋಗ ರಹಿತ ಬಿತ್ತನೆ ಗಡ್ಡೆ ಆಯ್ದುಕೊಳ್ಳಬೇಕು. ಕತ್ತರಿಸಿದ ಬೀಜದ ಗಡ್ಡೆಯನ್ನು 2 ಗ್ರಾಂ ಸಂಯುಕ್ತ ಶೀಲಿಂಧ್ರ ನಾಶಕವಾದ ಮೆಟಲಾಕ್ಸಿಲ್, ಮ್ಯೋಂಕೋಜೆಬ್ 1 ಲೀಟರ್ ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ 5 ನಿಮಿಷ ಅದ್ದಿ ಉಪಚರಿಸಿ ಬಿತ್ತಬೇಕು.

ಗಡ್ಡೆಗಳನ್ನು ಬಿತ್ತುವ ಮೊದಲು ಭೂಮಿಗೆ ಜೈವಿಕ ರೋಗ ನಾಶಕಗಳಾದ 1 ಕೆ.ಜಿ. ಟ್ರೈಕೋಡರ್ಮ ವಿರಿಡೆ, 1 ಕೆ.ಜಿ. ಟ್ರೈಕೋಡರ್ಮ ಹಾರ್ಜೀಯಾನಂ ಮತ್ತು 1 ಕೆ.ಜಿ. ಸುಡೊಮೊನಾಸ್ ಪ್ಲುರೋಸೆನ್ಸ್ ಜತೆಗೆ 5 ಕೆ.ಜಿ.ಬೀವಿನ ಹಿಂಡಿಯನ್ನು 45 ಕೆ.ಜಿ. ಕೊಟ್ಟಿಗೆ ಗೊಬ್ಬರಕ್ಕೆ ಹಾಕಿ 15 ದಿನದವರೆಗೆ ನೆರಳಿನಲ್ಲಿ ಶೇಖರಿಸಬೇಕು. ಜೀವಾಣು ವೃದ್ಧಿಯಾದ ನಂತರ ಮಿಶ್ರಣವನ್ನು ಎರಡು ಟನ್ ಗೊಬ್ಬರಕ್ಕೆ ಸೇರಿಸಿ ಭೂಮಿಗೆ ಹಾಕಿ ಬಿತ್ತನೆ ಮಾಡುವುದು.

ಸಿಂಪರಣೆ: ಮ್ಯೋಂಕೋಜೆಬ್ (ಡೈಥೇನ್ ಎಂ-45) ಅಥವಾ ಮೆಟಿರ‌್ಯಾಮ್ (ಪಾಲಿರ‌್ಯಾಮ್) ನ್ನು 2.5 ಗ್ರಾಂ. 1 ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು. ಇದರಿಂದ 5 ದಿನಗಳ ನಂತರ 2 ಗ್ರಾಂ 1 ಲೀಟರ್ ನೀರಿಗೆ ಹಾಕಿ ಸಿಂಪರಿಸಬೇಕು.

ಕರಜೆಟ್ ಅಥವಾ ರಿಡೋಮಿಲ್ ಎಂ.ಜೆಡ್ ಅನ್ನು ಸಿಂಪರಣೆ ಮಾಡಿದ್ದರೆ ಹಾಗೂ ರೋಗ ಕಡಿಮೆಯಾಗದಿದ್ದರೆ ಡೈಮಿಥೂ ಮಾರ್ಪ (ಆಕ್ರೋಬ್ಯಾಟ್) 1 ಗ್ರಾಂ ಜೊತೆಗೆ ಮೆಟರ‌್ಯಾಮ್ (ಪಾಲಿರ‌್ಯಾಮಾ) ಅಥವಾ ಮ್ಯೋಂಕೋಜೆಬ್ (ಡೈಥೇನ್ ಎಂ-45) 2 ಗ್ರಾಂ ಒಂದು ಲೀಟರ್ ನೀರಿಗೆ ಹಾಕಿ ಎಲೆ ಹಾಗೂ ಕಾಂಡದ ಎಲ್ಲ ಭಾಗಗಳೂ ನೆನೆಯುವಂತೆ ಸಿಂಪಡಿಸಬೇಕು. ವಿವರಕ್ಕೆ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT