ADVERTISEMENT

ಉತ್ಕೃಷ್ಟ ಗೊಬ್ಬರವಾಗಿ ಹೊಂಗೆ ಹೂವು

ಆರ್.ಚೌಡರೆಡ್ಡಿ
Published 2 ಏಪ್ರಿಲ್ 2012, 8:20 IST
Last Updated 2 ಏಪ್ರಿಲ್ 2012, 8:20 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳಿಗೆ ಹೊಂಗೆ ಹೂವನ್ನು ಮೇಲು ಗೊಬ್ಬರವಾಗಿ ಬಳಸಲಾಗುತ್ತಿದೆ. ಈ ಸಾಂಪ್ರದಾಯಿಕ ವಿಧಾನ ದಿಂದಾಗಿ ಉತ್ತಮ ಫಸಲನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಹೊಂಗೆ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿದೆ.

ಹೊಂಗೆ ಸುರುಗು, ಸೊಪ್ಪು, ಹೂ ಹಾಗೂ ಕಾಯಿಯನ್ನು ಗೊಬ್ಬರವನ್ನಾಗಿ ಬಳಸುವುದು ಹಿಂದಿ ನಿಂದಲೂ ನಡೆದು ಬಂದಿದೆ. ಹಿಂದೆ ಪ್ರತಿ ಕುಟುಂಬಕ್ಕೂ ಕನಿಷ್ಠ ಒಂದು ಹೊಂಗೆ ತೋಪು ಇರುತ್ತಿತ್ತು. ಬೇಸಿಗೆಯಲ್ಲಿ ಉದುರಿದ ತರಗೆಲೆಯನ್ನು ಗುಡಿಸಿ ತಿಪ್ಪೆಗೆ ಹಾಕುತ್ತಿದ್ದರು. ಅದರ ಮೇಲೆ ಗೋಡು ಮಣ್ಣನ್ನು ಹೊಡೆದು ಗೊಬ್ಬರ ತಯಾರಿಸುತ್ತಿದ್ದರು.
 
ಹೊಂಗೆ ಸೊಪ್ಪನ್ನು ಕತ್ತರಿಸಿ ಕೆಸರು ಗದ್ದೆಯಲ್ಲಿ ತುಳಿದು ಭತ್ತದ ಪೈರನ್ನು ನಾಟಿ ಮಾಡುವುದು ಹೊಸದೇನಲ್ಲ. ಕಾಯಿಯನ್ನು ಬೀಜದ ಸಮೇತ ಜಜ್ಜಿ ಜಮೀನಿಗೆ ಹಾಕಿ ಉಳುಮೆ ಮಾಡುವುದರ ಮೂಲಕ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದರು. ಇದರಿಂದ ಬೆಳೆಗಳ ಬೇರನ್ನು ಕತ್ತರಿಸಿ ನಷ್ಟ ಉಂಟುಮಾಡುವ ಗೊಣ್ಣೆ ಹುಳುಗಳ ನಿಯಂತ್ರಣವೂ ಸಾಧ್ಯವಾಗುತ್ತಿತ್ತು. ಹೊಂಗೆ ಎಣ್ಣೆ ದೀಪ ಉರಿಸಲು ಮತ್ತು ಕೆಲವು ಔಷಧಿಗಳ ತಯಾರಿಕೆ ಯಲ್ಲಿ ಬಳಕೆಯಾಗುತ್ತಿತ್ತು. ಇಂದು ಬಯೊಡೀಸೆಲ್ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತಿದೆ.

 ಹೊಂಗೆ ಹೂವನ್ನು ಬದನೆ, ಆಗಲ, ಪಡವಲ, ಹೀರೆ, ಸೋರೆ, ಮೆಣಸಿನ ಕಾಯಿ ಮುಂತಾದ ಬೆಳೆಗಳಿಗೆ ರಸಗೊಬ್ಬರದಂತೆ ಮೇಲು ಗೊಬ್ಬರವಾಗಿ ಬಳಸುವುದು ರೂಢಿಯಲ್ಲಿದೆ. ಬೇಸಿಗೆಯಲ್ಲಿ ಮರಗಳ ಕೆಳಗೆ ಉದುರಿದ ಹೂವನ್ನು ಗುಡಿಸಿ ಸಂಗ್ರಹಿಸಿದ ಬಳಿಕ ಬೆಳೆಯ ಬುಡದ ಬಳಿ ಹರಡಲಾಗುತ್ತದೆ. ನೆಲದಲ್ಲಿ ತೇವಾಂಶ ಹೆಚ್ಚುಕಾಲ ಉಳಿಯಲು ಸಾಧ್ಯವಾಗುತ್ತದೆ.

ನಿಧಾನವಾಗಿ ಕೊಳೆಯುವ ಹೂವು ಬೆಳೆಗೆ ಉತ್ಕೃಷ್ಟ ಗೊಬ್ಬರವಾಗಿ ಪರಿಣಮಿಸುತ್ತದೆ. ಮುಂದಿನ ಬೆಳೆಗೂ ಸತ್ವ ಸಿಗುತ್ತದೆ. ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಿದಂತೆ ಸಾಂಪ್ರದಾಯಿಕ ಗೊಬ್ಬರದ ಬಳಕೆ ಪ್ರಮಾಣ ಕುಸಿಯತೊಡಗಿದರೂ, ಅದನ್ನು ಸಂಪೂರ್ಣ ವಾಗಿ ಬಿಟ್ಟುಕೊಟ್ಟಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಹಿಂದಿನಂತೆ ಇಂದು ಹೊಂಗೆ ತೋಪುಗಳು ಕಂಡುಬರುತ್ತಿಲ್ಲ. ರಾಸಾಯನಿಕ ಗೊಬ್ಬರ ಬಳಕೆಗೆ ಬಂದ ಮೇಲೆ ಹೆಚ್ಚಿನ ಸಂಖ್ಯೆಯ ರೈತರು ಹೊಂಗೆ ತೋಪುಗಳನ್ನು ಕಡಿದುಹಾಕಿದ್ದಾರೆ. ಅಲ್ಲಿ ಮಾವು ಬೆಳೆಯುತ್ತಿದ್ದಾರೆ. ಇನ್ನು ಕೆಲವರು ವ್ಯವಸಾಯಕ್ಕೆ ಬಳಸುತ್ತಿದ್ದಾರೆ. ಆದರೂ ಉಳಿದಿರುವ ಹೊಂಗೆ ತೋಪುಗಳು ಮತ್ತು ಬಿಡಿ ಮರಗಳನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.