ADVERTISEMENT

ಉದ್ಯೋಗ ಖಾತ್ರಿ ಅಕ್ರಮ: ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:10 IST
Last Updated 11 ಫೆಬ್ರುವರಿ 2011, 9:10 IST

ಕೋಲಾರ: ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಕುರಿತು ಕಾರ್ಮಿಕರು, ಸಂಘಟನೆಗಳು, ಸಂಘ- ಸಂಸ್ಥೆಗಳು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉದ್ಯೋಗ ಖಾತರಿ ಯೋಜನೆಯ ಓಂಬುಡ್ಸ್‌ಮನ್, ನಿವೃತ್ತ ಪೊಲೀಸ್ ಅಧಿಕಾರಿ ಪಿ.ಮುನಿಸ್ವಾಮಿ ತಿಳಿಸಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಂಚಾಯಿತಿ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಅಧಿಕಾರಿಗಳ ಸಭೆಗೂ ಮುನ್ನ ಅವರು ಸುದ್ದಿಗಾರರೊಡನೆ ಮಾತನಾಡಿದರು

ಖಾತ್ರಿ ಯೋಜನೆಯ ಅಸಮರ್ಪಕ ನಿರ್ವಹಣೆ ಮತ್ತು ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ದೊರಕದಿರುವ ಕುರಿತು ಸರ್ಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಓಂಬುಡ್ಸ್‌ಮನ್ ನೇಮಕವಾಗಿದೆ. ಓಂಬುಡ್ಸ್‌ಮನ್‌ಗಳು ದೂರು, ಅಹವಾಲು ನಿರ್ವಹಣಾ ಘಟಕದಂತೆ ಕಾರ್ಯನಿರ್ವಹಿಸಲಿವೆ. ಯೋಜನೆಯ ನಿರ್ವಹಣೆಯ ಕುರಿತು ಯಾವುದೇ ದೂರುಗಳನ್ನು ಸ್ವೀಕರಿಸಿ ನಿಯಮಗಳ ಪ್ರಕಾರ ವಿಚಾರಣೆಗೆ ಒಳಪಡಿಸಲಾಗುವುದು. ಸಾಧ್ಯವಿದ್ದರೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವೆ ಎಂದು ತಿಳಿಸಿದರು.

ನಿಯಮ ಪಾಲಿಸಿ:  ಓಂಬುಡ್ಸ್‌ಮನ್ ನೇಮಕವಾಗಿದೆ ಎಂದು ಅಧಿಕಾರಿಗಳು ಅನಗತ್ಯವಾಗಿ ಭಯಪಡಬೇಕಾಗಿಲ್ಲ.ಸರ್ಕಾರದ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಅಧಿಕಾರಿಗಳಿಗೆ ಯಾವುದೇ ತೊಂದರೆ ಇಲ್ಲ. ನಿಯಮ ಮೀರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾವಾರು ಕ್ರಮವನ್ನಷ್ಟೆ ಅಲ್ಲದೆ, ಮತ್ತು ಅಪರಾಧ ದಂಡಸಂಹಿತೆಯ ಅಡಿಯಲ್ಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

‘ಸ್ವಯಂಸ್ಫೂರ್ತಿಯಿಂದ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ. ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಬಲ್ಲೆ. ಯೋಜನೆಯಲ್ಲಿ  ಅಕ್ರಮಗಳು ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ಆದರೆ ನಿರ್ದಿಷ್ಟ ವ್ಯಕ್ತಿ, ಸಂಘದಿಂದ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಯೋಜನೆ ಜಾರಿಯಲ್ಲಿ ಜಿಲ್ಲೆಯ ಸ್ಥಿತಿ-ಗತಿಗಳ ಕುರಿತು ಅಧ್ಯಯನ ನಡೆಸುವೆ. ಕಾರ್ಯಭಾರವನ್ನು ಗಮನಿಸಿ ಜಿಲ್ಲೆಗೆ ಎಷ್ಟು ದಿನ ಭೇಟಿ ನೀಡಬೇಕು ಎಂದು ನಿರ್ಧರಿಸುವೆ.

ಸುಳ್ಳು ದೂರಿಗೆ ಶಿಕ್ಷೆ: ದೂರು ಸ್ವೀಕರಿಸುವ ಅಧಿಕಾರಿ ಇದ್ದಾರೆಂಬ ಏಕೈಕ ಕಾರಣಕ್ಕೆ ದುರುದ್ದೇಶ, ವೈಯಕ್ತಿಕ ದ್ವೇಷಗಳ ಹಿನ್ನೆಲೆಯಲ್ಲಿ ಯಾರಾದರೂ ದೂರು ಕೊಟ್ಟಿದ್ದಾರೆಂಬುದು ಸಾಬೀತಾದರೆ ಅಂಂಥವರಿಗೆ ಶಿಕ್ಷೆಯನ್ನೂ ವಿಧಿಸಲಾಗುವುದು ಎಂದರು.

ಸಿಬ್ಬಂದಿ ರಕ್ಷಣೆ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು, ಬೆದರಿಕೆಗಳು ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಜನೆ ಜಾರಿಗೊಳಿಸುವ ಸಿಬ್ಬಂದಿಯ ಹಿತರಕ್ಷಣೆಯ ಕಡೆಗೂ ಗಮನ ಹರಿಸುವೆ. ಕಾನೂನು ಬದ್ಧರಾಗಿ ಕಾರ್ಯನಿರ್ವಹಿಸಿದರೆ ಸಿಬ್ಬಂದಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಶಾಂತಪ್ಪ, ಹಣಕಾಸು ಅಧಿಕಾರಿ ಲಕ್ಷ್ಮಿನಾರಾಯಣ, ಉಪಕಾರ್ಯದರ್ಶಿ ಲಕ್ಷ್ಮಿನಾರಾಯಣ, ಸಹಾಯಕ ಕಾರ್ಯದರ್ಶಿ ವೆಂಕಟರಮಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.