ADVERTISEMENT

`ಎಚ್‌ಐವಿ; ತಪ್ಪು ಗ್ರಹಿಕೆ ತೊಲಗಲಿ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 5:40 IST
Last Updated 24 ಡಿಸೆಂಬರ್ 2012, 5:40 IST

ಕೋಲಾರ: ಎಚ್‌ಐವಿ ಚಿಕಿತ್ಸೆಯನ್ನು ರೋಗಿ ತೆಗೆದುಕೊಂಡರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ತಪ್ಪು ಗ್ರಹಿಕೆ ಹೋಗಲಾಡಿಸುವ ಅಗತ್ಯವಿದೆ ಎಂದು ಜಿಲ್ಲಾ ಐಸಿಟಿಸಿ ಆಪ್ತ ಸಮಾಲೋಚಕ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಉದಯ ಕಿರಣ ಏಡ್ಸ್ ನಿವಾರಣಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಚ್‌ಐವಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಗಿಗಳು ಚಿಕಿತ್ಸೆ ಪಡೆಯುವುದರ ಜತೆ ಪೋಷಕಾಂಶದ ಆಹಾರ ಸೇವಿಸಬೇಕು. ಆಗ ಉತ್ತಮವಾಗಿ ಜೀವನ ನಿರ್ವಹಿಸಬಹುದು. ಜಿಲ್ಲೆಯಲ್ಲಿ ಎಂಟು ವರ್ಷದ ಹಿಂದೆ ಔಷಧಿ ಹಾಗೂ ಚಿಕಿತ್ಸೆ ಸೌಕರ್ಯದ ಕೊರತೆ ಇತ್ತು. ಆದರೆ ಈಗ ಜಿಲ್ಲೆಯಲ್ಲಿ ಉತ್ತಮ ಸೌಕರ್ಯಗಳು ಇವೆ ಎಂದರು.

ಹಲ ಜಾಗೃತಿ ಕಾರ್ಯಕ್ರಮ ಹೊರತಾಗಿಯೂ ಜಿಲ್ಲೆಯಲ್ಲಿ ಏಡ್ಸ್ ರೋಗಕ್ಕೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ನಗರದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಷ್ಟಾಗಿ ತಿಳಿವಳಿಕೆ ಇಲ್ಲ ಎಂದು ಹೇಳಿದರು.

ಎಚ್‌ಐವಿ ಪೀಡಿತರಿಗೆ ಬಹುತೇಕ ಚಿಕಿತ್ಸೆ ಉಚಿತವಾಗಿವೆ. ಇದರ ಬಗ್ಗೆ ಜನರು ಅರಿತು ಸಮುದಾಯದ ಅನಕ್ಷರಸ್ಥರಿಗೆ ಜಾಗೃತಿ ಮೂಡಿಸಬೇಕು. ಕೋಲಾರದಲ್ಲಿ ಉದಯ ಕಿರಣ ಸಂಘ ಸೇರಿದಂತೆ ಒಟ್ಟು ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ಏಡ್ಸ್ ಅರಿವು ಮೂಡಿಸುವುದಕ್ಕೆ ಶ್ರಮಿಸುತ್ತಿವೆ ಎಂದು ಹೇಳಿದರು.

ಸಂಘದ ನಾರಾಯಣಮ್ಮ ಸಂಘದ ಕುರಿತು ಮಾಹಿತಿ ನೀಡಿದರು. ರತ್ನಮ್ಮ, ನಾಗಮ್ಮ ಹಾಜರಿದ್ದರು. ಸುರೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.