ADVERTISEMENT

`ಎಚ್‌ಐವಿ ದೂರವಿಡಿ, ಸೋಂಕಿತರನ್ನಲ್ಲ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಕೋಲಾರ: ನಗರದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ರಕ್ತದಾನದ ಮಹತ್ವ, ಎಚ್‌ಐವಿ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ ನಡೆಯಿತು.

ಜಾಥಾದಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ರಕ್ತದಾನದಿಂದಾಗುವ ಪ್ರಯೋಜನಗಳ ಫಲಕ ಹಿಡಿದು ಘೋಷಣೆ ಕೂಗುವ ಮೂಲಕ ಮಹತ್ವ ತಿಳಿಸಿಕೊಟ್ಟರು.

ವಿದ್ಯಾರ್ಥಿಯೊಬ್ಬ ಕಪ್ಪು ಬಣ್ಣ ಮೆತ್ತಿಕೊಂಡು ಏಡ್ಸ್ ಕುರಿತು ಜಾಗೃತಿ ಮೂಡಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು. `ಎಚ್‌ಐವಿ ದೂರವಿಡಿ, ಸೋಂಕಿತರನ್ನಲ್ಲ', `ರಕ್ತದಾನ ಮಾಡಿ ಜೀವ ಉಳಿಸಿ' `ಏಡ್ಸ್ ಅನ್ನು ಸೊನ್ನೆಗೆ ತನ್ನಿ' ಎಂಬ ಫಲಕಗಳು ಗಮನ ಸೆಳೆದವು. ನೂರಾರು ವಿದ್ಯಾರ್ಥಿಗಳು ನಗರದ ಪ್ರವಾಸಿ ಮಂದಿರದಿಂದ ಹೊರಟು ಎಂ.ಜಿ.ರಸ್ತೆ, ಶ್ರೀನಿವಾಸಪುರ ವೃತ್ತದ ಮೂಲಕ ಚೆನ್ನಯ್ಯ ರಂಗಮಂದಿರ ತಲುಪಿದರು. ಇದೇ ವೇಳೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್' ವಾಹನ ನಗರದಲ್ಲೆಡೆ ಸಂಚರಿಸಿತು.

ಮೆರವಣಿಗೆಯಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.