ADVERTISEMENT

ಎರಡನೇ ಪಟ್ಟಿಯಲ್ಲಿ ಯಾರ ಹೆಸರು?

ಜಿಲ್ಲೆಯಲ್ಲಿ ಗರಿಗೆದರಿದ ಕುತೂಹಲ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 9:13 IST
Last Updated 8 ಏಪ್ರಿಲ್ 2013, 9:13 IST

ಕೋಲಾರ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ      ಆಕಾಂಕ್ಷಿಗಳು ಮತ್ತು ಬೆಂಬಲಿಗರಲ್ಲಿ ಹುಟ್ಟಿದ ಅಸಮಾಧಾನ ಭಾನುವಾರವೂ ಮುಂದುವರೆದಿತ್ತು.

ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಖಚಿತವಾಗಿರುವ ಶ್ರೀನಿವಾಸಪುರದಲ್ಲಿ ಜೆಡಿಎಸ್‌ನಿಂದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್‌ಕುಮಾರ್ ಬಿರುಸಿನ ಪ್ರಚಾರ ನಡೆಸಿದ್ದಾರೆ. ಟಿಕೆಟ್ ಘೋಷಣೆಯಾಗಿರುವ ವೆಂಕಟೇಗೌಡ ಮಾತ್ರ ಇನ್ನೂ ಪ್ರಚಾರ ಶುರು ಮಾಡಿಲ್ಲ. ಉಳಿದ ಕ್ಷೇತ್ರಗಳಲ್ಲಿ, ಎರಡನೇ ಪಟ್ಟಿಯಲ್ಲಿ ಯಾರ ಹೆಸರು? ಎಂಬ ಪ್ರಶ್ನೆ ತೀವ್ರ ಕುತೂಹಲ ಹುಟ್ಟಿಸಿದೆ.

ಮಾಲೂರು
ಬಿಜೆಪಿ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದರಿಂದ ತೀವ್ರ ಬೇಸರಗೊಂಡ ಮಾಲೂರು ಶಾಸಕ ಎಸ್.ಎನ್‌ಕೃಷ್ಣಯ್ಯಶೆಟ್ಟಿ ಶನಿವಾರ ಸಭೆ ನಡೆಸಿ ರಾಜಕೀಯ ನಿವೃತ್ತಿಯಾಗುವ ಘೋಷಣೆ ಪ್ರಕಟಿಸಿದರು. ಅವರನ್ನು ಸಮಾಧಾನ ಮಾಡಿದ್ದ ಬೆಂಬಲಿಗರು, ಭಾನುವಾರ ಬಿಜೆಪಿ ರಾಜ್ಯ ಘಟಕದ ಕಚೇರಿ ಮುಂದೆಯೇ ಧರಣಿ ನಡೆಸಿ ರಾಜ್ಯ ಮುಖಂಡರ ಗಮನ ಸೆಳೆದು, ಭರವಸೆ ಪಡೆದು ಬಂದಿದ್ದಾರೆ.
ಅದೇ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಎ.ನಾಗರಾಜು ಮತ್ತೊಮ್ಮೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ದೆಹಲಿಗೆ ತೆರಳಿದ ಅವರು ಮತ್ತೊಮ್ಮೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಕೆಲ ದಿನಗಳ ಹಿಂದೆ ದೆಹಲಿ ಪ್ರವಾಸ ಕೈಗೊಂಡು ವಾಪಸ್ ಬಂದಿದ್ದ ಅವರು ರಾಹುಲ್‌ಗಾಂಧಿಯವರನ್ನೇ ಭೇಟಿ ಮಾಡಿರುವುದಾಗಿ, ತಮಗೇ ಟಿಕೆಟ್ ದೊರಕುವುದು ಖಚಿತ ಎಂಬುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಮೊದಲನೇ ಪಟ್ಟಿಯಲ್ಲಿ ಅವರ ಹೆಸರಿಲ್ಲದಿರುವುದು ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ. ಹೀಗಾಗಿ ಅವರು ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನಲ್ಲೂ ಅಸಮಾಧಾನ ಮುಂದುವರಿದಿದೆ. `ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದ್ದಾರೆ' ಎಂದು ಮುನಿಸಿಕೊಂಡಿರುವ ಆರ್.ಪ್ರಭಾಕರ್, ಬೇರೆಯ ಉತ್ತಮ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅದಲ್ಲದೆ, ಅವರು ಪಕ್ಷೇತರರಾಗಿ ಸ್ಪರ್ಧಿಸಬಹುದೇ ಎಂಬ ಪ್ರಶ್ನೆಯೂ ಕ್ಷೇತ್ರದಲ್ಲಿ ಚರ್ಚೆಗೆ ದಾರಿ ಮಾಡಿದೆ. ಇಂಥ ಸನ್ನಿವೇಶದಲ್ಲೇ ಮಂಜುನಾಥ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಚಾರ ಮುಂದುವರಿಸಿದ್ದಾರೆ.

ಬಂಗಾರಪೇಟೆ
ಬಂಗಾರಪೇಟೆ ಕ್ಷೇತ್ರದಲ್ಲೂ ಜೆಡಿಎಸ್ ತೀವ್ರ ಕುತೂಹಲ ಹುಟ್ಟುಹಾಕಿದೆ. ಅಲ್ಲಿ ಬಿಜೆಪಿಯಿಂದ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್‌ನಿಂದ ಕೆ.ಎಂ.ನಾರಾಯಣಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಜೆಡಿಎಸ್‌ನಲ್ಲಿ ಮಾತ್ರ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ.

ಬಿಜೆಪಿಯಿಂದ ಜೆಡಿಎಸ್‌ಗೆ ಬಂದಿರುವ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿರುವ ರಾಮಚಂದ್ರಪ್ಪ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಲೇ ಇದ್ದಾರೆ. ಮೊದಲ ಪಟ್ಟಿಯಲ್ಲಿ ಯಾರದಾದರೂ ಒಬ್ಬರ ಹೆಸರು ಪ್ರಕಟವಾಗಿ ನಿರೀಕ್ಷೆಗೆ ತೆರೆ ಬೀಳಬಹುದು ಎಂಬ ಲೆಕ್ಕಾಚಾರ ತಪ್ಪಿದೆ. ಹೀಗಾಗಿ ಈ ಇಬ್ಬರಿಗೂ ಮತ್ತು ಅವರ ಬೆಂಬಲಿಗರಿಗೂ ಕಾಯುವುದು ಅನಿವಾರ್ಯವಾಗಿದೆ. ಯಾರಾದರೂ ಒಬ್ಬರಿಗೆ ಟಿಕೆಟ್ ದೊರಕಿದರೆ ಮತ್ತೊಬ್ಬರ ನಡೆ ಏನಾಗಿರಬಹುದು ಎಂಬುದರ ಬಗ್ಗೆಯೂ ಚರ್ಚೆ ಶುರುವಾಗಿದೆ.

ಮುಳಬಾಗಲು
ಮೂರೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿರದ ಮುಳಬಾಗಲು ಕ್ಷೇತ್ರದ ಪರಿಶಿಷ್ಟ ಸಮುದಾಯದ ಎಡ-ಬಲ ಗುಂಪುಗಳಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಜತೆಗೆ ಗುಂಪುಗಾರಿಕೆ ಇನ್ನಷ್ಟು ತೀವ್ರಗೊಂಡಿದೆ.

ಪಕ್ಷದ ಟಿಕೆಟ್‌ಗಾಗಿ 15ಕ್ಕೂ ಹೆಚ್ಚು ಮಂದಿ ಮನವಿ ಸಲ್ಲಿಸಿ ಕಾಯುತ್ತಿದ್ದಾರೆ. ಮತ್ತೆ ಟಿಕೆಟ್‌ಗಾಗಿ ಎದುರು ನೋಡುತ್ತಿರುವ ಶಾಸಕ ಅಮರೇಶ್ ವಿರುದ್ಧವೇ ಪಕ್ಷದ ಸ್ಥಳೀಯ ಮುಖಂಡರು ನಾಯಕರ ಸಮ್ಮುಖದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೂ ಆಗಿದೆ. ಅವರಿಗೆ ಟಿಕೆಟ್ ಕೊಡಬಾರದು ಎಂಬ ಆಗ್ರಹ ದೊಡ್ಡದಾಗಿದೆ. ಮತ್ತೆ ಟಿಕೆಟ್ ಗಿಟ್ಟಿಸಲು ಅಮರೇಶ್ ತೀವ್ರ ಯತ್ನದಲ್ಲಿದ್ದಾರೆ.

ಭೋವಿ ಜನಾಂಗದ ಹಿರಿಯ ಮುಖಂಡ ವಿ.ವೆಂಕಟಮುನಿ, ದಸಂಸ ಮುಖಂಡ ಎಂ.ವೆಂಕಟರವಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಯಾಮಣ್ಣ, ಕಗ್ಗನಹಳ್ಳಿ ಶ್ರೀನಿವಾಸ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಈಚಿನ ಬೆಳವಣಿಗೆಯಲ್ಲಿ ಮಾಜಿ ಸಚಿವ ಟಿ.ಚೆನ್ನಯ್ಯನವರ ಮೊಮ್ಮಗ, ಬೆಂಗಳೂರು ನಿವಾಸಿ ಡಾ.ಮುದ್ದು ಗಂಗಾಧರ ಎಂಬುವವರೂ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಯತ್ನಿಸಿ ಹಿನ್ನಡೆ ಕಂಡಿರುವ ಕೊತ್ತನೂರು ಮಂಜುನಾಥ್ ಅವರೂ ಕಾಂಗ್ರೆಸ್ ಟಿಕೆಟ್ ಪಡೆಯುವ ಪ್ರಬಲ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

ಇಡೀ ಜಿಲ್ಲೆಯ ಮೂರು ಮೀಸಲು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಾದರೂ ಮಹಿಳೆಗೆ ಟಿಕೆಟ್ ಕೊಡಬೇಕು ಎಂದು ಭೋವಿ ಸಮುದಾಯದ ಆಕಾಂಕ್ಷಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಜೆಡಿಎಸ್ ಮುಖಂಡರನ್ನು ಆಗ್ರಹಿಸುತ್ತಲೇ ಇದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋತಿರುವ ಎನ್.ಮುನಿಆಂಜಪ್ಪ ಮತ್ತೊಬ್ಬ ಪ್ರಬಲ ಸ್ಪರ್ಧಿ. ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್, ಡಾ.ಕೆ.ಎಂ.ಜಯರಾಮ್. ನಿವೃತ್ತ ಉಪವಿಭಾಗಾಧಿಕಾರಿ ಚಿಕ್ಕವೆಂಕಟಪ್ಪ, ಗ್ಯಾಸ್ ಏಜೆನ್ಸಿಯೊಂದರ ಮಾಲೀಕ ಶ್ರೀಧರಮೂರ್ತಿ. ಉಪನ್ಯಾಸಕ ಜಿ.ಎಂ.ಗೋವಿಂದಪ್ಪ, ಉದ್ಯಮಿ ಆದಿನಾರಾಯಣ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.

ಈ ನಡುವೆ ಬಿಜೆಪಿ ಟಿಕೆಟ್‌ಗಾಗಿ ರವಿಶಂಕರ್ ಗುರೂಜಿ ಆಶ್ರಮದ ಭಕ್ತ, ಮುಡಿಯನೂರಿನ ಶ್ರೀನಿವಾಸ್ ಮತ್ತು ವೆಂಕಟೇಶ್ ಎಂಬುವವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಕೋಲಾರ
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಸೀರ್ ಅಹ್ಮದ್, ಜೆಡಿಎಸ್‌ನಿಂದ ಕೆ.ಶ್ರೀನಿವಾಸಗೌಡ ಸ್ಪರ್ಧಿಸುವುದು ಖಚಿತವಾಗಿದ್ದು ಪ್ರಚಾರವೂ ನಡೆಯುತ್ತಿದೆ. ತಮಗೆ ಎದುರಾಳಿಯೇ ಇಲ್ಲ ಎಂದು ಘೋಷಿಸಿರುವ ಸಚಿವ ಆರ್.ವರ್ತೂರು ಪ್ರಕಾಶ್ ಪಕ್ಷೇತರರಾಗಿಯೇ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಶನಿವಾರವಷ್ಟೇ ಬಿಎಸ್‌ಆರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಆನಂದ್ ಅವರೇ ಅಧಿಕೃತ ಅಭ್ಯರ್ಥಿ ಎಂದು ಮುಖಂಡರೂ ಹೇಳಿದ್ದರೂ, ಅಧಿಕೃತವಾಗಿ ಪ್ರಕಟವಾಗಿಲ್ಲ.

ಕೆಜಿಎಫ್
ಕೆಜಿಎಫ್ ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರ ಎಂ.ಭಕ್ತವತ್ಸಲಂ ಅವರನ್ನು ಅಭ್ಯರ್ಥಿಯನ್ನಾಗಿಆಯ್ಕೆ ಮಾಡಿದೆ. ಉಳಿದಂತೆ ಬಿಜೆಪಿ-ಕಾಂಗ್ರೆಸ್‌ನಲ್ಲಿ ಪ್ರಯತ್ನ ನಡೆದಿದೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಮಗಳು ರೂಪಕಲಾ ಅವರಿಗೆ ಟಿಕೆಟ್ ಕೊಡಿಸುವ ಯತ್ನದಲ್ಲಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿದ್ದ ಶ್ರೀನಿವಾಸ್ ಮತ್ತು ವಿ.ಶಂಕರ್ ಕೂಡ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.

ಲಂಚ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ಶಾಸಕ ವೈ.ಸಂಪಂಗಿ ಟಿಕೆಟ್‌ಗಾಗಿ ಯತ್ನಿಸುತ್ತಿದ್ದರೂ, ಅವರ ವಿರುದ್ಧದ ಅಲೆಯೂ ಜೋರಾಗಿದೆ. ಡಾ.ಅರಿವಳಗನ್, ಡಾ.ದಿನಕರನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮುತ್ಯಾಲಮ್ಮ ಮತ್ತು ಆನೇಕಲ್ ನಾಗರಾಜ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಯಾರ ಹೆಸರು? ಎಂಬ ಪ್ರಶ್ನೆ ಹಲ ಚರ್ಚೆಗಳಿಗೆ ದಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.