ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ; ದಿನಗಣನೆ ಶುರು !

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 7:00 IST
Last Updated 14 ಜನವರಿ 2011, 7:00 IST

ಕೋಲಾರ: ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ನೋಟಿಸ್ ಬೋರ್ಡ್‌ನಲ್ಲಿ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ದಿನಗಣನೆ ಶುರುವಾಗಿದೆ !
ಪರೀಕ್ಷೆಯ ದಿನಗಳನ್ನು ಎಣಿಸುತ್ತಲೇ ಕಾರ್ಯನಿರ್ವಹಿಸಬೇಕು ಎಂಬ ಕಡ್ಡಾಯ ಸೂಚನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ನೀಡಿದೆ. ಹೀಗಾಗಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರೀಕ್ಷೆಯ ದಿನಗಣನೆ ಮಾಡುತ್ತಲೇ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.

ಪರೀಕ್ಷೆಗೆ ಇನ್ನು 76 ದಿನಗಳು ಉಳಿದಿರುವಂತೆ ವಿದ್ಯಾರ್ಥಿಗಳಲ್ಲಿ ನಿತ್ಯವೂ ಪರೀಕ್ಷೆಯ ಮೈಚಳಿ ಬಿಡಿಸುವ ಇಂಥ ವಿಶೇಷ ಪ್ರಯತ್ನಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.  ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಜಿಲ್ಲಾವಾರು ಪಟ್ಟಿಯಲ್ಲಿ 30ನೇ ಸ್ಥಾನ ಪಡೆದಿತ್ತು.

2007-08ನೇ ಸಾಲಿನಲ್ಲಿ 24ನೇ ಸ್ಥಾನ, 2008-09ನೇ ಸಾಲಿನಲ್ಲಿ 29ನೇ ಸ್ಥಾನದಲ್ಲಿದ್ದ ಜಿಲ್ಲೆ 2009-10ನೇ ಸಾಲಿನಲ್ಲಿ ಇನ್ನೂ ಒಂದು ಸ್ಥಾನ ಕೆಳಕ್ಕೆ ಕುಸಿದು, 30ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳುವಂತಾಗಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ ವಿಶೇಷ ಪ್ರಯತ್ನಗಳನ್ನು ಕೈಗೊಂಡಿದ್ದ ಇಲಾಖೆ ಜನವರಿ ಆರಂಭದಿಂದಲೇ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಗಳನ್ನು ಕೇಂದ್ರೀಕರಿಸಿದ ಪ್ರಯತ್ನಗಳತ್ತ ಗಮನ ಹರಿಸಿದೆ. ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿಗಳು ಈಗಾಗಲೇ 70ಕ್ಕೂ ಹೆಚ್ಚು ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆಗಳ ತಪಾಸಣೆ ನಡೆಸಿದ್ದಾರೆ.

ಶಾಲೆ ದತ್ತು: ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ 56 ಶಾಲೆಗಳನ್ನು ಇಲಾಖೆಯ 12 ಅಧಿಕಾರಿಗಳಿಗೆ ದತ್ತು ನೀಡಲಾಗಿದೆ. ಇಲಾಖೆ ಉಪನಿರ್ದೇಶಕರೇ ಬಂಗಾರಪೇಟೆ ತಾಲೂಕಿನ ಆರು ಶಾಲೆಗಳನ್ನು ದತ್ತು ಪಡೆದಿದ್ದಾರೆ. ದತ್ತು ನೀಡಲಾಗಿರುವ ಶಾಲೆಗಳಲ್ಲಿ 13 ಖಾಸಗಿ ಪ್ರೌಢಶಾಲೆಗಳಿವೆ. ಶೇ 51ರಷ್ಟು ಫಲಿತಾಂಶ ಪಡೆದ ಕೆಜಿಎಫ್ ವಲಯದಲ್ಲೆ ಅಂಥ 9 ಶಾಲೆಗಳಿವೆ. ಬಂಗಾರಪೇಟೆಯಲ್ಲಿ ಹೆಚ್ಚು ಶಾಲೆಗಳನ್ನು ದತ್ತು ನೀಡಲಾಗಿದೆ ಎಂಬುದು ಗಮನಾರ್ಹ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರಿಗೆ ದತ್ತು ನೀಡಲಾಗಿದೆ.

ಅಲ್ಲದೆ, ಫಲಿತಾಂಶ ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಮತ್ತು ಇಲಾಖೆಯು ಜಂಟಿಯಾಗಿ ಮುಖ್ಯಶಿಕ್ಷಕರಿಗಾಗಿ ಗುಣಾತ್ಮಕ ಫಲಿತಾಂಶದ ಮಾರ್ಗಸೂಚಿ ‘ಸ್ಪೂರ್ತಿ’ ಕೈಪಿಡಿಯನ್ನು ಕಳೆದ ಜುಲೈ ತಿಂಗಳಲ್ಲಿ ಪ್ರಕಟಿಸಿತ್ತು. ಫಲಿತಾಂಶ ಹೆಚ್ಚಳಕ್ಕೆ ಕಡ್ಡಾಯವಾಗಿ ಕೈಗೊಳ್ಳಬೇಕಾದ ಹಲವು ಕಾರ್ಯಕ್ರಮಗಳ ಬಗ್ಗೆ ಕೈಪಿಡಿಯಲ್ಲಿ ಸೂಚನೆಗಳನ್ನು ನೀಡಲಾಗಿತ್ತು.

ವಿದ್ಯಾರ್ಥಿ ಮಾರ್ಗದರ್ಶಿ: ಅದರ ಜೊತೆಗೆ, ಕಳೆದ ನವೆಂಬರ್‌ನಲ್ಲಿ ಪ್ರತಿ ವಿಷಯಕ್ಕೂ ಅಧ್ಯಾಯವಾರು ಪ್ರಶ್ನೆ ಮಾಲೆಗಳನ್ನುಳ್ಳ ವಿದ್ಯಾರ್ಥಿ ಮಾರ್ಗದರ್ಶಿಯನ್ನು ಕೂಡ ಪ್ರಕಟಿಸಲಾಗಿತ್ತು. ಅದರಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪ್ರಕ್ರಿಯೆಯೂ ಶುರುವಾಗಿತ್ತು. ಕಳೆದ ವರ್ಷದ ಕೊನೆವರೆವಿಗೂ ವಿಷಯದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದ ಇಲಾಖೆ, ಜನವರಿ ಮೊದಲ ವಾರದಿಂದ, ಪರೀಕ್ಷೆ ಎದುರಿಸುವ ಪೂರ್ವಸಿದ್ಧತಾ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ಪ್ರಯತ್ನಗಳ ಕಡೆಗೆ ಗಮನಹರಿಸಿದೆ.

ಜ.22ರಂದು ಸಭೆ: ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯುವುದನ್ನೆ ಅಭ್ಯಾಸ ಮಾಡಿಸುವ ಕೆಲಸ ಪ್ರತಿ ಶಾಲೆಯಲ್ಲೂ ನಡೆದಿದೆ. ಈಗಾಗಲೇ ಶಾಲೆ ಮತ್ತು ತಾಲ್ಲೂಕು ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ನಡೆದಿದೆ. ಆ ಪರೀಕ್ಷೆಗಳ ಫಲಿತಾಂಶವನ್ನು ಕೂಡ ಸಂಗ್ರಹಿಸುವ ವಿಶ್ಲೇಷಿಸುವ ಪ್ರಯತ್ನವೂ ನಡೆಯಲಿದೆ. ಜ.22ರಂದು ನಗರದ ಪವನ್ ಕಾಲೇಜು ಆವರಣದಲ್ಲಿ ನಡೆಯಲಿರುವ ಮುಖ್ಯಶಿಕ್ಷಕರ ಸಭೆಯಲ್ಲಿ ಶಾಲಾವಾರು ಫಲಿತಾಂಶದ ವಿಶ್ಲೇಷಣೆ ಮೂಲಕ ಜಿಲ್ಲೆಯ ಶೈಕ್ಷಣಿಕ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುವ ಉದ್ದೇಶವೂ ಇದೆ ಎಂದು ಪರೀಕ್ಷೆಯ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗುವಂಥ ಸನ್ನಿವೇಶ ನಿರ್ಮಿಸುವುದರ ಜೊತೆಗೆ ಗುಣಾತ್ಮಕ ಫಲಿತಾಂಶವನ್ನು ಹೆಚ್ಚಿಸುವ ಪ್ರಯತ್ನ ಭರದಿಂದ ನಡೆದಿದೆ.ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿರುವ ಭಯ ನೀಗಿಸುವುದರ ಕಡೆಗೆ ಇನ್ನು ಮುಂದೆ ಹೆಚ್ಚು ಗಮನ ಹರಿಸುತ್ತೇವೆ. ಸಂಭವನೀಯ ಪ್ರಶ್ನೆಪತ್ರಿಕೆಗಳನ್ನು ಕೂಡ ಸಿದ್ಧಪಡಿಸಿ ನೀಡಲಿದ್ದೇವೆ. ಫಲಿತಾಂಶದ ಜಿಲ್ಲಾವಾರು ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆಯಬೇಕೆಂಬ ಹಂಬಲ, ಮಹತ್ವಾಕಾಂಕ್ಷೆ ನಮ್ಮ ಜೊತೆಗಿದೆ’ ಎಂದು ಅವರು ತಿಳಿಸಿದ್ದಾರೆ.ಇಲಾಖೆ ಮಹತ್ವಾಕಾಂಕ್ಷೆಯಿಂದ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಗೆ ನಿರೀಕ್ಷಿತ ಫಲಿತಾಂಶ ದೊರಕುವುದೇ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.