ADVERTISEMENT

ಐದು ವರ್ಷದಲ್ಲಿ ಅರ್ಧ ಪ್ರಗತಿ !

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:25 IST
Last Updated 3 ಫೆಬ್ರುವರಿ 2011, 6:25 IST

ಕೋಲಾರ: ರಾಜ್ಯದ ಹಿಂದುಳಿದ, ಗಡಿ ಜಿಲ್ಲೆಯಾದ ಕೋಲಾರ ಸಂಪೂರ್ಣ ಸ್ವಚ್ಛತಾ ಆಂದೋಲನದ ಅನುಷ್ಠಾನದಲ್ಲಿಯೂ ಹಿಂದೆಯೇ ಉಳಿದಿದೆ.2005ರ ಅಕ್ಟೋಬರ್ 2ರಂದು ಜಾರಿಗೊಂಡ ಯೋಜನೆಯಲ್ಲಿ ಶೇ. 51ರಷ್ಟು ಮಾತ್ರ ಗುರಿ ಮುಟ್ಟಿ ಕುಂಟುತ್ತಲೇ ಇದೆ. ಬರುವ ಮಾರ್ಚಿಯೊಳಗೆ ಎಲ್ಲ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿ ಮುಟ್ಟುವುದು ಸಾಧ್ಯವಾಗದ ಸನ್ನಿವೇಶವಿದೆ.

ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಶೌಚಾಲಯರಹಿತ ಕುಟುಂಬಗಳಲ್ಲಿ ಶೌಚಾಲಯ ನಿರ್ಮಿಸುವುದೂ ಸೇರಿದಂತೆ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಾಲಯ ಬಳಕೆ ಹಾಗೂ ನಿರ್ವಹಣೆ, ಚರಂಡಿಗಳ ನಿರ್ವಹಣೆ, ತಿಪ್ಪೆ ಗುಂಡಿಗಳ ಸ್ಥಳಾಂತರ ಹಾಗೂ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ಕ್ರಮಬದ್ಧ ನಿರ್ವಹಣೆ, ವೈಯುಕ್ತಿಕ ಸ್ವಚ್ಛತೆ ಹಾಗೂ ಕುಟುಂಬ ಸ್ವಚ್ಛತೆಯನ್ನು ಸಂಪೂರ್ಣವಾಗಿ ಅನುಸರಿಸಿ ನಿರಂತರವಾಗಿ ಪರಿಸರ ನೈರ್ಮಲ್ಯವನ್ನು ಕಾಪಾಡುವ ಆಂದೋಲನದ ಉದ್ದೇಶ ಪೂರ್ಣ ಈಡೇರಿಲ್ಲ.

2005-06ನೇ ಸಾಲಿನಲ್ಲಿ ಜಿಲ್ಲೆಯ ಶೇ. 25ರಷ್ಟು ಅಂದರೆ 39 ಪಂಚಾಯ್ತಿಗಳನ್ನು, 06-07ರಲ್ಲಿ ಶೇ 50ರಷ್ಟು ಅಂದರೆ 78 ಪಂಚಾಯಿತಿಗಳನ್ನು ಮತ್ತು 07-08ರಲ್ಲಿ ಉಳಿದ ಶೇ 25ರಷ್ಟು ಅಂದರೆ 39 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳ ಪೈಕಿ ಬಂಗಾರಪೇಟೆ ತಾಲ್ಲೂಕಿನ ಮೂರು (ಚಿನ್ನಕೋಟೆ, ಕಾರಳ್ಳಿ ಮತ್ತು ಹುಲಿಬೆಲೆ) ಹಾಗೂ ಮುಳಬಾಗಲು ತಾಲ್ಲೂಕಿನ ಒಂದು (ಉತ್ತನೂರು) ಪಂಚಾಯಿತಿಯನ್ನು ಹೊರತುಪಡಿಸಿದರೆ ಬೇರಾವ ಕಡೆಯೂ ಆಂದೋಲನ ಪೂರ್ಣಗೊಂಡಿಲ್ಲ.

2004-05ರಲ್ಲಿ ಜಿಲ್ಲೆಯಲ್ಲಿ ಸರ್ವಕುಟುಂಬ ಸಮೀಕ್ಷೆ ನಡೆದಾಗ 88,765 ಎಪಿಎಲ್ ಮತ್ತು 54,832 ಬಿಪಿಎಲ್ ಕುಟುಂಬಗಳಲ್ಲಿ (1,43,597) ಶೌಚಾಲಯವಿರಲಿಲ್ಲ.  ಆಂದೋಲನ ಶುರುವಾಗಿ 2010ರ ಡಿಸೆಂಬರ್ 31ರ ವೇಳೆಗೆ 37,510 ಬಿ.ಪಿ.ಎಲ್ ಕುಟುಂಬಗಳಲ್ಲಿ ಮತ್ತು 36,688 ಏ.ಪಿ.ಎಲ್ ಕುಟುಂಬಗಳಲ್ಲಿ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ. 17,322 ಬಿಪಿಎಲ್ ಮತ್ತು  52,077 ಎಪಿಎಲ್ ಕುಟುಂಬಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕಿದೆ. ಉಳಿದಂತೆ 841 ಶಾಲಾ ಶೌಚಾಲಯ, 083 ಅಂಗನವಾಡಿ ಶೌಚಾಲಯಗಳನ್ನು ನಿರ್ಮಿಸಿ ನಿಗದಿತ ಗುರಿ ಮುಟ್ಟಿದ್ದರೂ, 12 ಸಮುದಾಯ ಶೌಚಾಲಯಗಳ ಪೈಕಿ ಕೇವ ಮೂರನ್ನು ಮಾತ್ರ ನಿರ್ಮಿಸಲಾಗಿದೆ. 

ಸಿಎಲ್‌ಟಿಎಸ್: ಯೋಜನೆಯ ಅನುಷ್ಠಾನದಲ್ಲಿ ಹಿಂದುಳಿದಿರುವುದನ್ನು ಗಂಭೀರಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯಿತಿಯು ಇದೀಗ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾರಿಗೆ ಬಂದಿರುವ, ಮಲವಿಸರ್ಜನೆ ಸ್ಥಳಕ್ಕೇ ತೆರಳಿ ಶೌಚಾಲಯದ ಮಹತ್ವಗಳ ಕುರಿತು ಜಾಗೃತಿ ಮೂಡಿಸುವ ಸಿಎಲ್‌ಟಿಎಸ್ (ಕಮ್ಯುನಿಟಿ ಲೆಡ್ ಟೋಟಲ್ ಸ್ಯಾನಿಟೇಶನ್- ಸಮುದಾಯ ನೇತೃತ್ವದ ಸಂಪೂರ್ಣ ನೈರ್ಮಲ್ಯ) ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಜಿಲ್ಲೆಯ 90 ಗ್ರಾಮ ಪಂಚಾಯಿತಿಗಳನ್ನು ಈ ಉದ್ದೇಶಕ್ಕೆಂದೇ ಆಯ್ಕೆ ಮಾಡಿಕೊಳ್ಳಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಎಲ್ಲ ಗ್ರಾಪಂಗಳನ್ನು ಆಯ್ಕೆ ಮಾಡಿರುವುದು ಗಮನಾರ್ಹ.

‘ಪ್ರಸ್ತುತ ಮಾರ್ಚಿ ಅಂತ್ಯದ ಹೊತ್ತಿಗೆ ಯೋಜನೆಯ ನಿಗದಿತ ಗುರಿ  ಮುಟ್ಟಲು ಅಸಾಧ್ಯ. ಹೀಗಾಗಿ ಇನ್ನೂ ಒಂದು ವರ್ಷ ಕಾಲ ಅಗತ್ಯವಿದೆ. ಈ ಅವಧಿಯಲ್ಲಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಹಂತಹಂತವಾಗಿ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಯತ್ನಿಸಲಾಗುವುದು. ಮೊದಲಿಗೆ ಬಂಗಾರಪೇಟೆಯನ್ನು ಮಾರ್ಚಿ ಅಂತ್ಯದೊಳಗೆ ಸಂಪೂರ್ಣ ಸ್ವಚ್ಛ ತಾಲ್ಲೂಕನ್ನಾಗಿ ಪರಿವರ್ತಿಸಲಾಗುವುದು. ನಂತರ ಕ್ರಮವಾಗಿ ಮಾಲೂರು, ಕೋಲಾರ, ಶ್ರೀನಿವಾಸಪುರ ಮತ್ತು ಮುಳಬಾಗಲು ತಾಲ್ಲೂಕುಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಯತ್ನಿಸಲಾಗುವುದು ಎಂದು ಜಿ.ಪಂ.  ಸಿಇಒ ಎನ್.ಶಾಂತಪ್ಪ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.