ADVERTISEMENT

ಒಳಚರಂಡಿ ದುರಸ್ತಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಕೋಲಾರ: ಒಳಚರಂಡಿ ತುಂಬಿ ರಸ್ತೆಯಲ್ಲಿ ಕೊಳಕು ನೀರು ಹರಿಯುತ್ತಿದ್ದರೂ ನಗರಸಭೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನಗರದ ಎಂ.ಬಿ.ರಸ್ತೆಯ ಸುತ್ತಮುತ್ತಲಿನ ನಿವಾಸಿಗಳು, ವ್ಯಾಪಾರಿಗಳು ಗುರುವಾರ ದಿಢೀರ್ ಧರಣಿ ನಡೆಸಿದರು.

ನಲ್ಲಗಂಗಮ್ಮ ದೇವಾಲಯ ಸಮೀಪ ರಸ್ತೆ ಮಧ್ಯದಲ್ಲೆ ಇರುವ ಒಳಚರಂಡಿ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಜನತೆ ಸಂಚರಿಸುವುದು ಕಷ್ಟಕರವಾಗಿದೆ. ರಸ್ತೆ ವಿಸ್ತರಣೆ ಸಲುವಾಗಿ ಒಡೆಯಲಾದ ಮಳಿಗೆಗಳ ಆವರಣದಲ್ಲೆ ದೂಳಿನ ನಡುವೆ ಕೆಲಸ ನಡೆಯುತ್ತಿದೆ. ಸಮೀಪದಲ್ಲೆ ಮಾಂಸದ ಮಾರುಕಟ್ಟೆಯೂ ಇದ್ದು, ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸ್ವಚ್ಛತೆ ನಿರ್ವಹಣೆ ವಿಷಯದಲ್ಲಿ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ರಸ್ತೆಗೆ ಅಡ್ಡವಾಗಿ ದಪ್ಪ ಕಲ್ಲುಗಳು, ಮರದ ಕೋಲುಗಳನ್ನು ಜೋಡಿಸಿ ವಾಹನ ಸಂಚಾರವನ್ನು ತಡೆದ ಪರಿಣಾಮವಾಗಿ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾರಿಗೆ ಬಸ್‌ಗಳೂ ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು.

ಸ್ಥಳಕ್ಕೆ ಬಂದ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಆರ್‌ಎಸ್‌ಟಿ ಖಾನ್ ಮತ್ತು ಸಿಬ್ಬಂದಿ ಸನ್ನಿವೇಶವನ್ನು ನಿಯಂತ್ರಿಸಿದರು. ನಗರಸಭೆ ಆರೋಗ್ಯ ನಿರೀಕ್ಷಕ ರಮೇಶ್ ಸ್ಥಳಕ್ಕೆ ಬಂದು ಧರಣಿ ನಿರತರ ಅಹವಾಲು ಆಲಿಸಿ, ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.