ADVERTISEMENT

ಕಡೆ ಕಾರ್ತಿಕ: ‘ದಕ್ಷಿಣ ಕಾಶಿ’ಯಲ್ಲಿ ಭಕ್ತ ಸಾಗರ

ಶತಶೃಂಗ ಪರ್ವತ ಶ್ರೇಣಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ– ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 14:54 IST
Last Updated 3 ಡಿಸೆಂಬರ್ 2018, 14:54 IST
ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಕರೆದೊಯ್ಯಲು ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು.
ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಕರೆದೊಯ್ಯಲು ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು.   

ಕೋಲಾರ: ನಗರದ ಹೊರವಲಯದ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಜಾತ್ರೆ ನಡೆಯಿತು.

ದೇವಾಲಯವನ್ನು ವಿದ್ಯುತ್‌ ದೀಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಸಾಗುವ ಮಾರ್ಗದ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಾಗತ ಕಮಾನು ಹಾಕಲಾಗಿತ್ತು. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ಭಕ್ತರ ದೊಡ್ಡ ದಂಡೇ ಹರಿದು ಬಂದಿತು. ಅಲ್ಲದೇ, ಅಕ್ಕಪಕ್ಕದ ಜಿಲ್ಲೆಗಳ ನೂರಾರು ಭಕ್ತರು ತಂಡೋಪತಂಡವಾಗಿ ಜಾತ್ರೆಗೆ ಬಂದರು.

ಜಾತ್ರೆ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗಿನಿಂದ ಮೇಲಿನವರೆಗೂ ಜನವೋ ಜನ. ದೇವರ ದರ್ಶನ ಪಡೆಯಲು ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ADVERTISEMENT

ಸಾರಿಗೆ ವ್ಯವಸ್ಥೆ: ಬಜರಂಗ ದಳ ಸಂಘಟನೆಯು ಭಕ್ತರ ಅನುಕೂಲಕ್ಕಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಿಂದ ಬೆಟ್ಟದವರೆಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿತ್ತು. ನಿಲ್ದಾಣದ ಸಮೀಪ ಶಿವ, ಹನುಮ, ಶ್ರೀರಾಮನ ಕಟೌಟ್‌ ಹಾಗೂ ಬೃಹತ್ ಸ್ವಾಗತ ಕಮಾನುಗಳು ರಾರಾಜಿಸುತ್ತಿದ್ದವು.

ರಸ್ತೆಯ ಇಕ್ಕೆಲಗಳಲ್ಲಿ ಭಗವ ಧ್ವಜಗಳನ್ನು ಕಟ್ಟಲಾಗಿತ್ತು. ಇಡೀ ಪ್ರದೇಶ ಕೇಸರಿಮಯವಾಗಿತ್ತು. ಭಕ್ತರ ಅನುಕೂಲಕ್ಕಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರು ಜಾತ್ರೆಯ ಯಶಸ್ಸಿಗೆ ಒಂದು ವಾರದಿಂದ ಸಿದ್ಧತೆ ನಡೆಸಿದ್ದರು.

ಅನ್ನದಾನ: ಕಾಶಿ ವಿಶ್ವೇಶ್ವರ ದೇವಾಲಯದ ಬಳಿಯ ಕಲ್ಲಿನ ಬಸವ ಮೂರ್ತಿಯ ಬಾಯಿಯಿಂದ ಬರುವ ಸಿಹಿ ನೀರನ್ನು ಕುಡಿಯಲು ಭಕ್ತರು ಮುಗಿಬಿದ್ದರು. ಮತ್ತೆ ಕೆಲ ಭಕ್ತರು ಬಾಟಲಿಗಳಿಗೆ ನೀರು ತುಂಬಿಸಿಕೊಂಡರು. ಇನ್ನು ಕೆಲವರು ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು.

ಭಕ್ತರಿಗಾಗಿ ಬೆಟ್ಟದ ಮೇಲೆ ಹಾಗೂ ಕೆಳ ಭಾಗದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು. ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಕಿಲಾರಿಪೇಟೆಯ ಗೋಕುಲ ಮಿತ್ರ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿ ವರ್ಷದಂತೆ ಈ ಬಾರಿಯೂ ಅನ್ನದಾನ ನಡೆಸಿದರು. ಭಕ್ತರ ಬಾಯಾರಿಕೆ ತಣಿಸಲು ಕುಡಿಯುವ ನೀರಿನ ಪ್ಯಾಕೆಟ್‌ ಉಚಿತವಾಗಿ ವಿತರಿಸಲಾಯಿತು. ‘ನಮ್ಮ ಗೆಳೆಯರ ಬಳಗ’ದ ಸದಸ್ಯರು ಭಕ್ತರಿಗೆ ಸಸಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.