ADVERTISEMENT

ಕನ್ನಡದಲ್ಲಿ ಐಎಎಸ್‌: ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2014, 5:31 IST
Last Updated 14 ಜೂನ್ 2014, 5:31 IST

ಬೇತಮಂಗಲ (ಪಾಲಾರ್‌ ವೇದಿಕೆ): ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆಯುವವರಿಗೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್‌ ಅಭಿಪ್ರಾಯಪಟ್ಟರು.

ಬಂಗಾರಪೇಟೆ ತಾಲ್ಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿನ ಯುವಕ– ಯುವತಿಯರು ದೇಶದಲ್ಲೇ ಹೆಚ್ಚು ಸಂಖ್ಯೆಯಲ್ಲಿ ಐಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಅವರಲ್ಲಿ ಬಹುತೇಕರು ತಮಿಳು ಭಾಷೆಯಲ್ಲೇ ಪರೀಕ್ಷೆ ಎದುರಿಸುತ್ತಿದ್ದಾರೆ. ಅದಕ್ಕೆ ಅಲ್ಲಿನ ರಾಜ್ಯ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ ಎಂದರು.

ಎರಡು ಬಾರಿ ಇಂಗ್ಲಿಷ್‌ನಲ್ಲಿ ಐಎಎಸ್‌ ಪರೀಕ್ಷೆಗೆ ಹಾಜರಾಗಿ ತೇರ್ಗಡೆಯಾಗದೆ, ಮೂರನೇ ಬಾರಿಗೆ ಕನ್ನಡದಲ್ಲಿ ಪರೀಕ್ಷೆ ಬರೆದು ಗುರುದತ್ತ ಹೆಗಡೆ ತೇರ್ಗಡೆಯಾಗಿರುವುದು ಹೆಮ್ಮೆಯ ವಿಷಯ. ಇದನ್ನು ಹೊಸ ತಲೆಮಾರು ಮಾದರಿಯಾಗಿ ಪರಿಗಣಿಸಬೇಕು ಎಂದು ಹೇಳಿದರು.

ವಿಕೇಂದ್ರೀಕರಣ: ತಾಲ್ಲೂಕು ಸಮ್ಮೇಳನವನ್ನು ತಾಲ್ಲೂಕು ಕೇಂದ್ರದಲ್ಲೇ ನಡೆಸುವ ಸಂಪ್ರದಾಯ ಮುರಿದು ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿಯೇ ಹೋಬಳಿ ಕೇಂದ್ರವಾದ ಬೇತಮಂಗಲದಲ್ಲಿ ಸಮ್ಮೇಳನ ನಡೆಸಲಾಯಿತು. ಮುಂದಿನ 10 ತಿಂಗಳೊಳಗೆ ಎಲ್ಲ ಹೋಬಳಿಗಳಲ್ಲೂ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ಎಲ್ಲ ಹೋಬಳಿ ಕೇಂದ್ರಗಳಲ್ಲೂ ಪರಿಷತ್‌ನ ಘಟಕಗಳನ್ನು ಸ್ಥಾಪಿಸಲಾಗುವುದು. ತಾಲ್ಲೂಕು ಘಟಕಗಳು ಈ ನಿಟ್ಟಿನಲ್ಲಿ ಸ್ಪಂದಿಸಬೇಕು ಎಂದರು.

ಎಲ್ಲ ಹೋಬಳಿ ಕೇಂದ್ರಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಬೇಕು. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಲಕ್ಷ್ಮಿನಾರಾಯಣ. ಕ್ಷೇತ್ರದ ಶಿಕ್ಷಣಾಧಿಕಾರಿ ಕೆ.ಜಯರಾಜ್,. ಗ್ರಾಮ ಪಂಚಾಯತಿ ಅಧ್ಯಕ್ಷೆ ಗೋವಿಂದಮ್ಮ, ಉಪಾಧ್ಯಕ್ಷ ವೆಂಕಟೇಶ್, ಕನ್ನಡ ಸಂಘದ ಅಧ್ಯಕ್ಷ ಎಂ.ಸುಬ್ರಮಣಿ, ನವಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಾಜಗೋಪಾಲಗೌಡ, ಜಿಲ್ಲಾ ಘಟಕದ ಚಿನ್ನಿ ವೆಂಕಟೇಶ್, ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಎಲ್.ಎ.ವಿಜಯಕುಮಾರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಬಂಗಾರಪೇಟೆ ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣೇಗೌಡ, ಕೆಜಿಎಫ್ ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಎನ್.ಆರ್.ವಿಜಯಕುಮಾರ್‌,  ವಿವೇಕಾನಂದ ಸಂಘದ ಅಧ್ಯಕ್ಷ ಜೆ.ಜಿ.ವಿಶ್ವನಾಥ್‌, ಗ್ರಾಮೀಣ ಪೌ್ರಢಶಾಲೆಯ ಮುಖ್ಯಶಿಕ್ಷಕಿ ಶ್ಯಾಮಲಾ ವೇದಿಕೆಯಲ್ಲಿದ್ದರು. ಎ,.ಅಶ್ವಥರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಆರ್‌.ಅಶ್ವಥ್‌ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.