ADVERTISEMENT

ಕಳಪೆ ಮಾವು ಸಸಿಗಳ ಮಾರಾಟ ಭರಾಟೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:25 IST
Last Updated 19 ಜುಲೈ 2012, 10:25 IST

ಶ್ರೀನಿವಾಸಪುರ: ಮಳೆಗಾಲ ಆರಂಭವಾಗುತ್ತಿದಂತೆ ಪಟ್ಟಣದಲ್ಲಿ ಮಾವಿನ ಸಸಿ ಮಾರಾಟ ಮಳಿಗೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ. ಬಹುತೇಕ ಆಂಧ್ರ ಪ್ರದೇಶದಿಂದ ತರಿಸುವ ವಿವಿಧ ಜಾತಿಯ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ಸಸಿಯೊಂದರ ಬೆಲೆ ಅದರ ಜಾತಿ ಆಧರಿಸಿ ನಿಗದಿ ಪಡಿಸಲಾಗುತ್ತದೆ. ಈ ಬಾರಿ ಮಾತ್ರ ಮಾವಿನ ಸಸಿ ಬೆಲೆ ಗಗನಕ್ಕೇರಿದೆ. ಸಸಿಯೊಂದರ ಬೆಲೆ ರೂ.80 ರಿಂದ ರೂ.300 ರವರೆಗೆ ಇದೆ.

ಮಾವಿನ ತೋಟ ಬೆಳೆಸುವ ಮನೋಭಾವ ಹೆಚ್ಚಿರುವುದರಿಂದ ಇಲ್ಲಿ ಪ್ರತಿ ವರ್ಷ ಸಾವಿರಾರು ಮಾವಿನ ಸಸಿಗಳ ಮಾರಾಟವಾಗುತ್ತದೆ. ಶ್ರೀನಿವಾಸಪುರ ಮಾವಿಗೆ ಪ್ರಸಿದ್ಧಿ ಪಡೆದಿರುವುದರಿಂದ ರೈತರು ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಮಾವಿನ ಸಸಿ ಖರೀದಿಸಿ ಕೊಂಡೊಯ್ದು ನಾಟಿ ಮಾಡುತ್ತಾರೆ.

ಆದರೆ ಕಳಪೆ ಗುಣಮಟ್ಟದ ಸಸಿಗಳಿಂದ ಮಾವು ಬೆಳೆಗಾರರ ಶ್ರಮ ಹಾಗೂ ಬಂಡವಾಳಕ್ಕೆ ಸಂಚಕಾರ ಬರುತ್ತಿದೆ. ಇಲ್ಲಿನ ವ್ಯಾಪಾರಿಗಳು ಮಾರುವ ಸಸಿಗಳು ಪ್ರಮಾಣೀಕೃತ ಸಸಿಗಳಲ್ಲ. ಅವರು ಹೇಳಿದಷ್ಟು ಹಣ ಕೊಟ್ಟು ಸಸಿ ಖರೀದಿಸಬೇಕಾಗುತ್ತದೆ. ಆದರೆ ಸಸಿಗಳ ಗುಣಮಟ್ಟದ ಬಗ್ಗೆ ಯವುದೇ ಖಾತ್ರಿ ನೀಡಲಾಗುವುದಿಲ್ಲ. ಜೊತೆಗೆ ಖರೀದಿಸಿದ್ದಕ್ಕೆ ರಸೀದಿ ನೀಡುವ ಪದ್ಧತಿಯೂ ಇಲ್ಲ. ಒಂದು ವೇಳೆ ರಸೀದಿ ಕೇಳಿದರೆ ಸಸಿಗಳಿಲ್ಲದೆ ಹಿಂದಿರುಗಬೇಕಾಗುತ್ತದೆ.

ವ್ಯಾಪಾರಿಗಳು ತಮ್ಮಲ್ಲಿನ ಸಸಿಗಳನ್ನು ಹಾಡಿ ಹೊಗಳಿ ಮಾರಾಟ ಮಾಡುತ್ತಾರಾದರೂ; ಅವುಗಳ ಗುಣಮಟ್ಟ ತಿಳಿಯಲು ಕನಿಷ್ಠ ಮೂರು ನಾಲ್ಕು ವರ್ಷ ಬೇಕಾಗುತ್ತದೆ. ಕಾಯಿ ಬಿಟ್ಟಾಗಷ್ಟೇ ಸಸಿಗಳ ನಿಜವಾದ ಗುಣಮಟ್ಟ ತಿಳಿಯಲು ಸಾಧ್ಯವಾಗುತ್ತದೆ. ಕಡಿಮೆ ಗುಣಮಟ್ಟದ ಕಾಯಿಗಳು ಕಾಣಿಸಿಕೊಂಡಾಗ ಬೆಳೆಗಾರರಿಗೆ ತಾವು ಮೋಸ ಹೋಗಿರುವುದಾಗಿ ತಿಳಿಯುತ್ತದೆ. ಆಗ ವಿಚಾರಿಸಲು ಹೋದರೆ ಆ ಸಸಿಗಳನ್ನು ಮಾರಾಟ ಮಾಡಿದ ವ್ಯಾಪಾರಿಯೇ ಇರುವುದಿಲ್ಲ. ಇದ್ದರೂ ಏನಾದರೊಂದು ನೆಪ ಹೇಳಿ ಜಾರಿಕೊಳ್ಳುವುದು ಸಾಮಾನ್ಯ.

ಮಾವಿನ ಸಸಿಗಳ ವ್ಯಾಪಾರ ವಹಿವಾಟು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ, ಸಸಿ ವ್ಯಾಪಾರಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಸಸಿ ಮಾರಾಟ ಮಾಡಲು ಪ್ರೇರೇಪಿಸಿದೆ. ನಾಟಿ ಸಮಯದಲ್ಲಿ ಮೋಸ ಹೋದ ಬೆಳೆಗಾರರು ಫಸಲಿಗೆ ಬಂದ ನಂತರ ಕಳಪೆಯೆಂದು ಕಂಡುಬಂದ ಗಿಡಗಳ ಕೊಂಬೆ ಕತ್ತರಿಸಿ ಮತ್ತೆ ಚಿಗುರು ಬಂದ ಮೇಲೆ ಉತ್ತಮ ಗುಣಮಟ್ಟದ ಗಿಣ್ಣು ಕಸಿ ಮಾಡಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಜೊತೆಗೆ ಮತ್ತೆ ಫಸಲನ್ನು ಕಾಣಬೇಕಾದರೆ ಮೂರರಿಂದ ನಾಲ್ಕು ವರ್ಷ ಕಾಯಬೇಕಾಗುತ್ತದೆ.

ಈ ಕಳಪೆ ಸಸಿಗಳ ಹಾವಳಿಯಿಂದ ಪಾರಾಗಲು ಕೆಲವು ರೈತರು ನಾಟಿ ಮಾವಿನ ಸಸಿ ಖರೀದಿಸಿ ನಾಟಿ ಮಾಡುತ್ತಿದ್ದಾರೆ. ಅವುಗಳ ಬೆಲೆಯೂ ಕಡಿಮೆ. ಅವು ಬೆಳೆದ ಮೇಲೆ ಕೊಂಬೆಗಳನ್ನು ಕತ್ತರಿಸಿ ತಮಗೆ ಬೇಕಾದ ಜಾತಿಯ ಮಾವಿನ ಗಿಡದ ಗಿಣ್ಣನ್ನು ತಂದು ಕಸಿ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಉತ್ತಮ ಗುಣಮಟ್ಟದ ಫಸಲನ್ನು ಪಡೆದುಕೊಳ್ಳಬಹುದಾಗಿದೆ.

ಮಾವಿನ ಸಸಿಗಳನ್ನು ಖರೀದಿ ಮಾಡುವ ರೈತರು ಅನುಭವಿ ರೈತರ ಮಾರ್ಗದರ್ಶನ ಪಡೆಯುವುದು ಹೆಚ್ಚು ಕ್ಷೇಮಕರ. ಅದರೊಂದಿಗೆ ಸಸಿಗಳ ಗುಣಮಟ್ಟ ಖಾತ್ರಿ ಪಡಿಸಿಕೊಂಡ ಬಳಿಕ, ಖರೀದಿಸಿದ ಸಸಿಗಳಿಗೆ ಸಂಬಂಧಿಸಿದಂತೆ ರಸೀದಿ ನೀಡುವಂತೆ ವ್ಯಾಪಾರಿಗಳ ಮೇಲೆ ಒತ್ತಡ ಹೇರಬೇಕಾಗುತ್ತದೆ. ಇಲ್ಲವಾದರೆ ದೀರ್ಘ ಕಾಲದ ಶ್ರಮ ವ್ಯರ್ಥವಾಗುವ ಅಪಾಯ ಇರುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.