ADVERTISEMENT

ಕಾಲುಬಾಯಿ ಜ್ವರ ಲಸಿಕೆ ಕೊಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:40 IST
Last Updated 24 ಜನವರಿ 2011, 10:40 IST

ಶ್ರೀನಿವಾಸಪುರ: ಪಶುಪಾಲಕರು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ಕೊಡಿಸುವುದರ ಮೂಲಕ ಆರೋಗ್ಯ ಕಾಪಾಡಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ಡಾ.ಎನ್.ಶ್ರೀರಾಮರೆಡ್ಡಿ ಸಲಹೆ ಮಾಡಿದರು.

ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದಲ್ಲಿ ಕೋಲಾರ ಹಾಲು ಒಕ್ಕೂಟ, ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕಾಲುಬಾಯಿ ಜ್ವರದ ವಿರುದ್ಧ ಉಚಿತ ಲಸಿಕೆ ನೀಡುವ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಜಾನುವಾರುಗಳು ಗ್ರಾಮೀಣ ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ವೈಜ್ಞಾನಿಕ ರೀತಿಯಲ್ಲಿ ಅವುಗಳ ಪಾಲನೆ ಮಾಡಿದಲ್ಲಿ ಲಾಭ ಪಡೆದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳದರು.

ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಸಿ.ಮುನಿವೆಂಕಟಪ್ಪ ಮಾತನಾಡಿ, ಕ್ಷೀರೋತ್ಪಾದನೆ ಜಿಲ್ಲೆಯ ರೈತರ ಜೀವನಕ್ಕೆ ಆಧಾರವಾಗಿದೆ. ಕೋಲಾರ ಹಾಲು ಒಕ್ಕೂಟ ಹಾಗೂ ಪಶುಪಾಲನಾ ಇಲಾಖೆ ಸೀಮೆ ಹಸುಗಳ ಆರೋಗ್ಯ ರಕ್ಷಣೆಗೆ ಮುಂದಾಗಿವೆ. ಗ್ರಾಮಗಳಿಗೆ ಬಂದು ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ಯನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಕೊಡಿಸಬೇಕು ಎಂದು ಹೇಳಿದರು.

ಆರಿಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಯರಾಮ್, ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಶಿವರಾಜ್, ಹಿರಿಯ ಪಶುವೈದ್ಯ ಡಾ. ಕೆ.ಸಿ.ಗುರಪ್ಪ, ಪಶುವೈದ್ಯಾಧಿಕಾರಿ ಡಾ. ಮಂಜುನಾಥರೆಡ್ಡಿ, ಮೇಲ್ವಿಚಾರಕ ಎಂ. ಚಿಕ್ಕಹನುಮಯ್ಯ, ಎನ್. ನಾಗರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸರೆಡ್ಡಿ ಸ್ವಾಗತಿಸಿದರು. ನಾರಾಯಣಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.