ADVERTISEMENT

ಕಾಳಸಂತೆಯಲ್ಲಿ ಪಡಿತರ ಅಕ್ಕಿ: ದೂರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:48 IST
Last Updated 20 ಜುಲೈ 2013, 9:48 IST

ಕೋಲಾರ: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ತಡೆಗೆ ಆಗ್ರಹಿಸಿ ರೈತ ಸಂಘದ ಮಹಿಳೆಯರು ನಗರದಲ್ಲಿ ಶುಕ್ರವಾರ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಚೆನ್ನಬಸಪ್ಪ ಕೊಡ್ಲಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ವ್ಯಾಪಕವಾಗಿ ಪಡಿತರ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಅದನ್ನು ತಡೆಗಟ್ಟುವ ಬದಲು ಇಲಾಖೆಯು ಮೌನಕ್ಕೆ ಶರಣಾಗಿದೆ. ಕಾಳಸಂತೆಯಲ್ಲಿ ಮಾರಾಟ ಮಾಡಲು ಸಿದ್ಧಪಡಿಸುತ್ತಿದ್ದ ಪಡಿತರ ಅಕ್ಕಿಯ ದಾಸ್ತಾನನ್ನು ಸಂಘವೇ ಇಲಾಖೆಗೆ ಹಿಡಿದುಕೊಟ್ಟರೂ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಮಟ್ಟದ ಕೆಲವೇ ಅಧಿಕಾರಿಗಳ ಕುಮ್ಮಕ್ಕಿನಿಂದ ಪಡಿತರ ಪದಾರ್ಥಗಳು ಬಡವರ ಬದಲಿಗೆ ನೇರವಾಗಿ ಕಾಳಸಂತೆ ತಲುಪುತ್ತಿವೆ. ಕಿರಿಯ ಅಧಿಕಾರಿಗಳ ಮೇಲೆ ಕಣ್ಗಾವಲು ಇಡಬೇಕಾದ ಅಧಿಕಾರಿಗಳು  ಸುಮ್ಮನಿದ್ದಾರೆ ಎಂದು ದೂರಿದರು.

ಪ್ರತಿ ತಿಂಗಳೂ ಜಿಲ್ಲೆಯ ಬಹುತೇಕ ರೈಸ್‌ಮಿಲ್‌ಗಳಲ್ಲಿ ಜಿಲ್ಲೆಯ ಮತ್ತು ಹೊರಜಿಲ್ಲೆಗಳ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿ 10 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇಂಥ ಅಕ್ರಮದ ವಿರುದ್ಧ ಕೂಡಲೇ ಕ್ರಮಕೈಗೊಳ್ಳದೇ ಹೋದರೆ ಇಲಾಖೆ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇತ್ತೀಚೆಗೆ ಬೆಳಕಿಗೆ ಬಂದಿರುವ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾದ ಪ್ರಕರಣಗಳ ತನಿಖೆ ಶೀಘ್ರ ನಡೆಸಬೇಕು. ಬಡವರ ಅನ್ನ ಕಸಿಯುತ್ತಿರುವ ಎಲ್ಲ ಕಾಳಸಂತೆಕೋರರಿಗೆ ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.