ADVERTISEMENT

ಕಾಸಿಗಾಗಿ ಸುದ್ದಿ ಮೇಲೆ ಕಣ್ಗಾವಲು: ಡಿಸಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:18 IST
Last Updated 3 ಏಪ್ರಿಲ್ 2013, 9:18 IST

ಕೋಲಾರ: ಚುನಾವಣೆ ಸಂಬಂಧ ಯಾವುದೇ ರೀತಿಯಲ್ಲಿ ಪ್ರಚಾರ ಮಾಡಿದರೂ, ಅಭ್ಯರ್ಥಿ ಅಥವಾ ಪಕ್ಷದಿಂದ ಅಧಿಕೃತ ಮನವಿಪತ್ರವನ್ನು ಮಾಧ್ಯಮಗಳ ಪ್ರಕಾಶಕರು ಪಡೆದಿರುವುದು ಕಡ್ಡಾಯ. ಇಲ್ಲವಾದಲ್ಲಿ ಅಂಥ ಪ್ರಕಾಶನ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.

ನಗರದ ವಾರ್ತಾಭವನದಲ್ಲಿ ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಹೀರಾತು ಪ್ರಕಟಣೆ ಸಂದರ್ಭದಲ್ಲಿಯೂ ಸೂಕ್ತ ದಾಖಲೆಗಳನ್ನು ಮಾಧ್ಯಮ ಸಂಸ್ಥೆಗಳು ಹೊಂದಿರಲೇಬೇಕು ಎಂದರು.

ಮಾಧ್ಯಮಗಳ ಮೇಲೆ ಕಣ್ಗಾವಲು ಇಡಲು ರಚಿಸಲಾಗಿರುವ ತಂಡದ ಸದಸ್ಯರು ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರಕಟವಾದ ಎಲ್ಲ ಪ್ರಚಾರ ಸಾಮಗ್ರಿಗಳ ಮಾಹಿತಿಯನ್ನು ಸಂಗ್ರಹಿಸಿ ಚುನಾವಣಾಧಿಕಾರಿಗೆ ಸಲ್ಲಿಸುತ್ತಾರೆ. ಈ ಪ್ರಕ್ರಿಯೆ ಸಲುವಾಗಿ ಶ್ಯಾಡೊ ರಿಜಿಸ್ಟರ್ ಅನ್ನೂ ನಿರ್ವಹಿಸಲಾಗುವುದು ಎಂದರು.

ಅಭ್ಯರ್ಥಿಗೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸಿದವರ ಹೆಸರು, ವಿಳಾಸಗಳ ಪರಿಶೀಲನೆಯನ್ನೂ ಮಾಡಲಾಗುವುದು. ಬೇನಾಮಿ ಹೆಸರಲ್ಲಿ ಕರಪತ್ರಗಳನ್ನು ಮುದ್ರಿಸಿದರೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರಪತ್ರಗಳನ್ನು ಮುದ್ರಿಸುವವರು ಅಭ್ಯರ್ಥಿಯ ಅಧಿಕೃತ ಮನವಿ ಪತ್ರದ ಜೊತೆಗೆ ಇಬ್ಬರು ಸ್ಥಳೀಯರ ದೃಢೀಕರಣವನ್ನೂ ಪಡೆಯುವುದೂ ಕಡ್ಡಾಯ ಎಂದರು.

ಮತದಾರರ ಪಟ್ಟಿ
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವವರಿಂದ ಏ.7ರವರೆಗೂ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅರ್ಹ ಮತದಾರರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪಟ್ಟಿಗೆ ಸೇರಿಸಲಾಗುವುದು. ಈ ನಿಟ್ಟಿನಲ್ಲಿ ಮೂವರು ಅಧಿಕಾರಿಗಳ ಮೂರು ಉಸ್ತುವಾರಿ ತಂಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಶ್ರೀನಿವಾಸಪುರ ಮತ್ತು ಮುಳಬಾಗಲಿಗೆ ಕೃಷ್ಣೇಗೌಡ, ಮಾಲೂರು ಮತ್ತು ಕೋಲಾರಕ್ಕೆ ಗಾಯತ್ರಿ ಮತ್ತು ಬಂಗಾರಪೇಟೆ-ಕೆಜಿಎಫ್‌ಗೆ ಪಲ್ಲವಿ ಎಂಬುವವರನ್ನು ನೇಮಿಸಲಾಗಿದೆ.  ದಾಖಲಾತಿಗಳಿಲ್ಲದ ಅರ್ಜಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಲು ಎಲ್ಲ ಹಂತದ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಫಿಕರ್ ಉಲ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ವಾರ್ತಾ ಇಲಾಖೆಯ ಸಿ.ಎಂ.ರಂಗಾರೆಡ್ಡಿ ಉಪಸ್ಥಿತರಿದ್ದರು.

ಬಂಗಾರಪೇಟೆಯಲ್ಲಿ ಮಳೆ
ಬಂಗಾರಪೇಟೆ: ಪಟ್ಟಣ ಹಾಗೂ ತಾಲ್ಲೂಕಿನ ಕೆಲವೆಡೆ ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ವಾತಾವರಣ ಕೊಂಚ ತಂಪಾಗಿದೆ. ಕಳೆದ ಕೆಲ ದಿನಗಳಿಂದ ಭಾರಿ ಬಿಸಿಲಿದ್ದು, ಉಷ್ಣಾಂಶ ಹೆಚ್ಚಾಗಿತ್ತು. ಸುಮಾರು ಒಂದು ಗಂಟೆ ಕಾಲ ಸುರಿದ ಮಳೆ ಬಿಸಿಲಿನ ಬೇಗೆಯಿಂದ ತಾತ್ಕಾಲಿಕ ಬಿಡುಗಡೆ ನೀಡಿದೆ. ಕೆಲ ಬೀದಿಗಳಲ್ಲಿ ಮನೆ ಮುಂದೆ ನೀರಿನ ಡ್ರಂ, ಪಾತ್ರೆಗಳನ್ನಿಟ್ಟು ನೀರು ತುಂಬಿಸುತಿದ್ದ ದೃಶ್ಯ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.