ಕೋಲಾರ: ಹಲವು ತಿಂಗಳುಗಳಿಂದ ನಗರಸಭೆಗೆ ಸರಬರಾಜು ಮಾಡಿದ ಕುಡಿಯುವ ನೀರಿನ ಬಿಲ್ ಪಾವತಿ ಮಾಡಲು ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನೀರಿನ ಟ್ಯಾಂಕರ್ ಮಾಲೀಕರು ಸೋಮವಾರ ನಗರಸಭೆ ಕಚೇರಿ ಮುಂಭಾಗದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ನಗರಸಭೆ ಕಚೇರಿಯ ಬಾಗಿಲು ತೆರೆಯುತ್ತಿದ್ದಂತೆಯೇ ಕಚೇರಿಯ ಆವರಣದಲ್ಲಿ ಟ್ಯಾಂಕರ್‌ಗಳನ್ನು ತಂದು ಅಡ್ಡಾದಿಡ್ಡಿ ನಿಲ್ಲಿಸಿ, ಬಿಲ್ ಪಾವತಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಸಾರ್ವಜನಿಕರ ಉಪಯೋಗಕ್ಕಾಗಿ ಅಧಿಕಾರಿಗಳ ಮನವಿ ಮೇರೆಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಬಿಲ್ ಪಾವತಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಪ್ರತಿಬಾರಿಯೂ ಸಾಬೂಬು ಹೇಳುತ್ತಿದ್ದಾರೆ. ಬಿಲ್ ಪಾವತಿ ಮಾಡದ ಕಾರಣ, ಟ್ಯಾಂಕರ್‌ಗಳ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ ಎಂದು ಟ್ಯಾಂಕರ್ ಮಾಲೀಕರು ದೂರಿದರು.
ಪ್ರತಿಭಟನೆ ಒಂದು ಗಂಟೆ ನಡೆಯಿತು. ನಂತರ ನಗರಸಭೆ ಅಧಿಕಾರಿಗಳು ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.