ADVERTISEMENT

ಕುಡೆನೂರಿನಲ್ಲಿ ಹೊಳೆವ ನಿಂಬೆ...

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 4:45 IST
Last Updated 8 ನವೆಂಬರ್ 2012, 4:45 IST

ಮಾಲೂರು: ಬೇಸಾಯಕ್ಕೆ ನೀರಿನ ಕೊರತೆ ನಡುವೆಯೇ ಲಭ್ಯವಿರುವ ನೀರನ್ನು ಬಳಸಿ ಎರಡು ಎಕರೆ  ಭೂಮಿಯಲ್ಲಿ ಹೈಬ್ರೀಡ್ ನಿಂಬೆ ಗಿಡ ನಾಟಿ ಮಾಡಿ ಎರಡು ವರ್ಷದ ನಂತರ ಹಣ ಗಳಿಸುತ್ತಿರುವ ರೈತರೊಬ್ಬರು ತಾಲ್ಲೂಕಿನಲ್ಲಿದ್ದಾರೆ. 

ತಾಲ್ಲೂಕಿನ ಕುಡೆನೂರು ಗ್ರಾಮದ ರೈತ ವೆಂಕಟಸ್ವಾಮಿ ಕಾಲಕ್ಕೆ ತಕ್ಕಂತೆ ತಮ್ಮ ಬೇಸಾಯ ಪದ್ಧತಿ ಬದಲಿಸಿಕೊಂಡು ಕಡಿಮೆ ಖರ್ಚು, ಕಡಿಮೆ ನೀರು ಬಳಕೆಯಿಂದ ನಿಂಬೆ ಹಣ್ಣು ಬೆಳೆದು ಹೆಚ್ಚಿನ ಲಾಭ ಗಳಿಸುವ ದಾರಿ ಕಂಡುಕೊಂಡಿದ್ದಾರೆ.

ದ್ವಿತೀಯ ಪಿಯುಸಿ ತನಕ ವ್ಯಾಸಂಗ ಮಾಡಿರುವ ವೆಂಕಟಸ್ವಾಮಿ ತಮ್ಮ ಭಾಗಕ್ಕೆ ಬಂದಿರುವ ಪಿತ್ರಾರ್ಜಿತ ಆಸ್ತಿ ಎರಡು ಎಕರೆ ಭೂಮಿಯಲ್ಲಿ ನಿಂಬೆ ಗಿಡ ನಾಟಿ ಮಾಡಿದ್ದಾರೆ. ತಾಲ್ಲೂಕಿನ ಮಳೆ ಪರಿಸ್ಥಿತಿ ಹಾಗೂ ಕೊಳವೆ ಬಾವಿ ನೀರಿನ ಲಭ್ಯತೆ ಬಗ್ಗೆ ಅರಿತಿರುವ ಅವರು 2006ರಲ್ಲಿ ಹೆಸರಘಟ್ಟ ಕೃಷಿ ವಿಶ್ವವಿದ್ಯಾಲಯದ ಪ್ರೊ.ನಂಜುಂಡಪ್ಪ ಅವರ ಸಲಹೆಯಂತೆ  ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಿಂದ ಹೈಬ್ರೀಡ್ ನಿಂಬೆಗಿಡಗಳನ್ನು ತಂದು ನಾಟಿಮಾಡಿ ಮಿಶ್ರ ಬೇಸಾಯ ಆರಂಭಿಸಿದರು.

ಪಂಚಾಯಿತಿ ವತಿಯಿಂದ ಕೃಷಿ ಹೊಂಡ ನಿರ್ಮಿಸಿ ನೀರನ್ನು ಬಳಸಿಕೊಂಡರು. ಎರಡು ವರ್ಷದ ನಂತರ ಫಸಲು ಪ್ರಾರಂಭವಾಯಿತು. ಈಗ ವಾರದಲ್ಲಿ ಒಂದು ದಿನ ನೂರರಿಂದ ನೂರೈವತ್ತು ಕೆಜಿ ನಿಂಬೆಹಣ್ಣು ಸಿಗುತ್ತಿದೆ. ಯಾವುದೇ ವಾತಾವರಣದಲ್ಲೂ ವರ್ಷವಿಡೀ ಫಸಲು ನೀಡುವ ಈ ನಿಂಬೆಗಿಡಗಳು ಹೆಚ್ಚು ಲಾಭ ತಂದುಕೊಡುತ್ತಿವೆ.

ಗಿಡದಿಂದ ಗಿಡಕ್ಕೆ 20ಕ್ಕೆ 20 ಅಡಿ ಅಂತರದಲ್ಲಿ 3ಕ್ಕೆ 3ಅಡಿ ಆಳ ತೆಗೆದು ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣು ಸೇರಿಸಿರುವ ಅವರು ಕನಿಷ್ಠ ವಾರಕೊಮ್ಮೆ ನೀರು ಹರಿಸುತ್ತಾರೆ. ಹೆಚ್ಚು ನೀರು ಉಣಿಸಿದಲ್ಲಿ ಹೆಚ್ಚು ಇಳುವರಿ ಸಿಗುತ್ತದೆ.

ರೈತ ವೆಂಕಟಸ್ವಾಮಿ ತನ್ನ ಬೇಸಾಯ ಪದ್ಧತಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ನಿಂಬೆಗಿಡಗಳನ್ನು ಕಸಿ ಮಾಡಿ ಗಿಡವೊಂದಕ್ಕೆ 50ರಿಂದ 70 ರೂಪಾಯಿಯಂತೆ ರೈತರಿಗೆ ಮಾರಾಟ ಾಡುತ್ತಿದ್ದಾರೆ. ತಾಲ್ಲೂಕು ಸೇರಿದಂತೆ ಆನೇಕಲ್ಲು, ಬೆಂಗಳೂರಿನ ಹೊರಮಾವು, ಮೈಸೂರು ಜಿಲ್ಲೆಯಿಂದ ಗಿಡ ಖರೀದಿಸಲು ರೈತರು ಬರುತ್ತಿರುವುದು ವಿಶೇಷ.

ಸಾಮಾನ್ಯವಾಗಿ ತರಕಾರಿಗಳಿಗೆ ನೀರು ಹೆಚ್ಚು ಬೇಕು. ರೋಗ ಬಾಧೆ ನಿವಾರಣೆಗೆ ಕ್ರಿಮಿ ನಾಶಕ ಬಳಸಲೇಬೇಕು. ಇಷ್ಟಾದರೂ ಬೆಳೆಗೆ ಬೆಲೆ ಸಿಗುವುದು ಗ್ಯಾರಂಟಿ ಇಲ್ಲ. ಅದನ್ನು ಮನಗಂಡ ರೈತ ವೆಂಕಟಸ್ವಾಮಿ ನಿಂಬೆ ಕಡೆ ಗಮನ ಹರಿಸಿ ಸಫಲವಾಗಿದ್ದಾರೆ.

ತೋಟಗಾರಿಕೆ ಇಲಾಖೆ ರೈತರ ಅಭಿವೃದ್ಧಿಗೆ ಸಾಮಾನ್ಯವಾಗಿ ತೆಂಗು, ಮಾವು, ಸಫೋಟ ಗಿಡಗಳನ್ನು ನೀಡುತ್ತಾರೆ. ರೈತರು ಐದು ವರ್ಷ ಕಾದರೂ ಉತ್ತಮ ಇಳುವರಿ ಖಾತರಿ ಇರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಇಲಾಖೆ ಎಚ್ಚೆತ್ತುಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಹಾಗೂ ಉತ್ತಮ ಬೆಲೆ ಸಿಗುವ ನಿಂಬೆಗಿಡಗಳನ್ನು ವಿತರಿಸಬೇಕು ಎಂಬುದು ವೆಂಕಟಸ್ವಾಮಿ ಅವರ  ಸಲಹೆ.

ಆರ್ಯುವೇದದಲ್ಲಿ ನಿಂಬೆಗೆ ಅಗ್ರಸ್ಥಾನವಿದೆ. ಆಹಾರ ಪದಾರ್ಥಗಳಿಗೆ, ಜ್ಯೂಸ್ ಮತ್ತು ಗಿಡದ ಎಲೆಗಳನ್ನು ತೈಲ ತಯಾರಿಕೆಗೆ ಬಳಸಲಾಗುತ್ತದೆ. ಪೂಜಾಕಾರ್ಯಗಳಿಗೆ ನಿಂಬೆಯ ಮಹತ್ವ ಅರಿಯದವರೇ ಇಲ್ಲ.          

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.