ADVERTISEMENT

ಕೆಎಂಎಫ್ ವಿರುದ್ಧ ಆಕ್ರೋಶ; ಪ್ರತಿಭಟನೆ

`ರೇಷ್ಮೆ ಮೇಲಿನ ತೆರಿಗೆ ಇಳಿಕೆ: ರೈತರಿಗೆ ಸಂಕಷ್ಟ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:34 IST
Last Updated 22 ಡಿಸೆಂಬರ್ 2012, 9:34 IST

ಕೋಲಾರ: ರೇಷ್ಮೆ ಮೇಲಿನ ತೆರಿಗೆ ಇಳಿಕೆ ಮಾಡಿರುವುದರಿಂದ ರೈತರು ಸಂಕಷ್ಟ ಎದುರಿಸಬೇಕಿದೆ. ಇದರ ಬಗ್ಗೆ ಸರ್ಕಾರ ಮರು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ರೈತ ಸಂಘ, ಹಸಿರುಸೇನೆ ಸಮಿತಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೋರಾಟಗಾರ ಎನ್.ಡಿ.ಸುಂದರೇಶ್ ಸ್ಮರಣಾರ್ಥ ನಡೆದ ಪ್ರತಿಭಟನೆಯಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ತೀವ್ರ ನಷ್ಟಕ್ಕೀಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸಹಕಾರ ಸಂಘ ಮತ್ತು ಬ್ಯಾಂಕುಗಳು ರೈತರಿಗೆ ಮೊಕದ್ದಮೆ ಹೂಡಿ ನೋಟಿಸ್ ಜಾರಿ ಮಾಡುತ್ತಿರುವುದು ಅತ್ಯಂತ ಖಂಡನೀಯ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೊತ್ತಂಬರಿ ಜಿ.ಮಂಜುನಾಥ್ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ರೈತರನ್ನು ಕೇವಲ ಭರವಸೆಗಳಲ್ಲಿಯೇ ಸಂತೃಪ್ತಿಪಡಿಸುತ್ತಿದ್ದಾರೆ. ಆರ್ಥಿಕವಾಗಿ ಸದೃಢರಾಗಲು ಯಾವುದೇ ಯೋಜನೆ ಅನುಷ್ಠಾನ ತರುತ್ತಿಲ್ಲ ಎಂದು ದೂರಿದರು. ಮಾರುಕಟ್ಟೆ ಅಭಿವೃದ್ಧಿಪಡಿಸಬೇಕಿರುವ ಕೆಎಂಎಫ್ ಆಡಳಿತ ಮಂಡಳಿ ಬೇಜಾಬ್ದಾರಿ ಕಾರಣ ನೀಡಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಬಯಲು ಸೀಮೆ ಜಿಲ್ಲೆಗಳ ಹೋರಾಟಗಾರರಿಗೆ ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ಡಾ.ಪರಮಶಿವಯ್ಯ ವರದಿ ಯಥಾವತ್ ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡಿದರು.

ಗ್ರಾಮೀಣ ಭಾಗಕ್ಕೆ ಕನಿಷ್ಠ 8 ಗಂಟೆ ನಿರಂತರವಾಗಿ ಮೂರು ಫೇಸ್ ವಿದ್ಯುತ್ ಪೂರೈಸಬೇಕು ಎಂದು ಸರ್ಕಾರದ ಆದೇಶವಿದ್ದರೂ ಬೆಸ್ಕಾಂ ಮಾತ್ರ ತಮಗೆ ಇಷ್ಟಬಂದಂತೆ ಲೋಡ್‌ಶೆಡ್ಡಿಂಗ್ ಜಾರಿಗೊಳಿಸುತ್ತಿದ್ದಾರೆ. ರೈತರು ಬೆಳೆದಿರುವ ಕೋಟ್ಯಂತರ ರೂಪಾಯಿ ಮೌಲ್ಯ ಬೆಲೆಬಾಳುವ ಬೆಳೆ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ಕಮೀಷನರ್ ಅವರಿಗೆ ಪಹಣಿ ತಿದ್ದುಪಡಿ ಮಾಡುವ ಅಧಿಕಾರವಿದೆ. ತಿದ್ದುಪಡಿಗೆ ಹೋದ ಕಡತ ವರ್ಷಗಟ್ಟಲೇ ವಿಲೇವಾರಿಯಾಗದೇ ಬಾಕಿ ಉಳಿದಿವೆ. ಇದರಿಂದ ರೈತರು ತಿಂಗಳಾನುಗಟ್ಟಲೇ ಕಚೇರಿಗಳಿಗೆ ಅಲೆಯಬೇಕಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ತೆರ‌್ನಹಳ್ಳಿ ವೆಂಕಟೇಶ್‌ಗೌಡ, ಕಾರ್ಯಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ, ಸಂಘಟನಾ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೆ.ಎಂ.ವೆಂಕಟಾಚಲಪತಿ, ಕೋಲಾರ ತಾಲ್ಲೂಕು ಅಧ್ಯಕ್ಷ ಹೊಳಲಿ ಹೊಸೂರು ಚಂದ್ರಪ್ಪ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಕೆಜಿಎಫ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿ.ಆರ್.ಲಕ್ಷ್ಮೀನಾರಾಯಣ, ಖಜಾಂಚಿ ಮಾಗೇರಿ ಸೀನಪ್ಪ, ಕೋಲಾರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ ಮಂಜುನಾಥ್, ಚಲಪತಿ, ವಿದ್ಯಾರ್ಥಿ ಸಂಘಟನಾ ಸಂಚಾಲಕ ವೀರಾಪುರ ಮಂಜುನಾಥ್, ದೊಡ್ನಹಳ್ಳಿ ಕೃಷ್ಣಪ್ಪ, ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ, ಕೃಷ್ಣಪ್ಪ, ಹುತ್ತೂರು ಪಾಲ್ಗೊಂಡಿದ್ದರು.

ಪ್ರವೇಶಾತಿ ಅವಧಿ ವಿಸ್ತರಣೆ
ಕೋಲಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರವೇಶಾತಿ ದಿನಾಂಕವನ್ನು ರೂ.400 ದಂಡ ಶುಲ್ಕದೊಂದಿಗೆ ಡಿ.31 ರವರೆಗೆ ವಿಸ್ತರಿಸಲಾಗಿದೆ.

ಆಸಕ್ತರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ, ಕೋಲಾರ. 2ನೇ ಮುಖ್ಯ ರಸ್ತೆ, ಸೋಮೇಶ್ವರ ದೇವಸ್ಥಾನದ ಹತ್ತಿರ, ಕೋಟೆ, ಕೋಲಾರ ಅಥವಾ ದೂ.08152-220301 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.