ADVERTISEMENT

ಕೆಜಿಎಫ್ ಬಾಲಮಂದಿರದಲ್ಲಿ ಬಾಲಕಿಯರ ಆರ್ಭಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 7:30 IST
Last Updated 21 ಜುಲೈ 2012, 7:30 IST

ಕೆಜಿಎಫ್: ಹೊರಗೆ ಸಂಚರಿಸಲು ಅವಕಾಶ ನೀಡಬೇಕು, ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಹತ್ತಾರು ಬಾಲಕಿಯರು ಸಿಬ್ಬಂದಿ ಜೊತೆ ಜಟಾಪಟಿ ನಡೆಸಿ, ಕಿಟಕಿ ಗಾಜುಗಳನ್ನು ಒಡೆದ ಘಟನೆ ಕೆಜಿಎಫ್‌ನ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಸ್ಕಂನಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿ ಶುಕ್ರವಾರ ನಡೆದಿದೆ.

ಈ ಘಟನೆ ನಡೆಯುತ್ತಿರುವಾಗಲೇ 10 ಬಾಲಕಿಯರು ಪರಾರಿಯಾಗಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಪತ್ತೆಹಚ್ಚಿದ್ದಾರೆ. 10 ಬಾಲಕಿಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರೌಢಾವಸ್ಥೆಯಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಇರುವ ಬಾಲಮಂದಿರದ 15 ಬಾಲಕಿಯರು ತಮಗೂ ಎಲ್ಲರಂತೆ ಸ್ವತಂತ್ರರಾಗಿ ಹೊರಹೋಗಲು ಅವಕಾಶ ನೀಡಬೇಕು, ಬಾಲಮಂದಿರದಲ್ಲಿ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕಿಟಕಿ ಗಾಜುಗಳನ್ನು ಕಲ್ಲುಗಳಿಂದ ಒಡೆದು ಧ್ವಂಸಗೊಳಿಸಿದ್ದಾರೆ. ಬಾಲಮಂದಿರದ ಟಿವಿ, ಪೀಠೋಪಕರಣ, ಬಾಗಿಲುಗಳನ್ನು ಒಡೆದು ಪ್ರತಿಭಟಿಸಿ, ದಾಂದಲೆ ನಡೆಸಿದ್ದಾರೆ.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಚರ್ಚಿಸುತ್ತಿದ್ದ ವೇಳೆಯಲ್ಲೇ ಬಾಲಕಿಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ತೂರಾಟಕ್ಕೆ ಮುಂದಾದರು.

ಕಿಟಕಿ ಗಾಜುಗಳನ್ನು ಒಡೆದು ಚೂರಿನಿಂದ ಆತ್ಯಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಘಟನೆಯೂ ನಡೆಯಿತು. ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಪರಾರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶಶಿಕಲಾಶೆಟ್ಟಿ ಅವರು ಬಾಲಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದ ವೇಳೆಯಲ್ಲೇ ಬಾಲಮಂದಿರದಲ್ಲಿದ್ದ ದೀಪಾಶ್ರೀ, ಸುಮಾ, ಅನು, ನಂದಿನಿ, ಅನಿತಾ, ಶೀಲಾ, ರಾಧಾ, ಮಂಜುಳಾ, ರಾಧ, ಅಮಲ  ಎಂಬುವವರು ಪರಾರಿಯಾದರು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಬಾಲಕಿಯರ ಪತ್ತೆಯಾಗಿ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ಕೈಗೊಂಡರು. 10 ಬಾಲಕಿಯರ ಪೈಕಿ ಅನು, ಶೀಲಾ, ರಾಧ ಹಾಗೂ ನಂದಿನಿ ಎಂಬ ನಾಲ್ವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಬಾಲಮಂದಿರದ ಅಧಿಕಾರಿಗಳಿಗೆ ಒಪ್ಪಿಸಿದರು.

ದೂರು ದಾಖಲು: ಬಾಲಮಂದಿರದ ಮೇಲ್ವಿಚಾರಕಿ ರುಕ್ಮಿಣಿ ಅವರು ನೀಡಿದ ದೂರಿನ ಮೇರೆಗೆ ಬಾಲಕಿಯರ ವಿರುದ್ಧ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳ ಅಡಿ ದೂರು ದಾಖಲಾಗಿದೆ, 10 ಬಾಲಕಿಯರ ವಿರುದ್ಧ ಹಲ್ಲೆ ನಡೆಸಿದ ಬಗ್ಗೆ ಕವಿತಾ, ಶೋಭಾ ಅವರ ವಿರುದ್ಧ ದೂರು ದಾಖಲಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕವಿತಾ, ಶೋಭಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಕೆಜಿಎಫ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್.ಎಸ್.ಮಮದ್‌ಪುರ್ ಬಾಲಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸ್ಥಳದಲ್ಲಿ ಕೆಜಿಎಫ್ ಪ್ರಭಾರಿ ಡಿವೈಎಸ್‌ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.