ADVERTISEMENT

ಕೆಸರುಗದ್ದೆಯಾದ ಕೆಜಿಎಫ್ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:05 IST
Last Updated 1 ಅಕ್ಟೋಬರ್ 2012, 6:05 IST
ಕೆಸರುಗದ್ದೆಯಾದ ಕೆಜಿಎಫ್ ರಸ್ತೆಗಳು
ಕೆಸರುಗದ್ದೆಯಾದ ಕೆಜಿಎಫ್ ರಸ್ತೆಗಳು   

ಕೆಜಿಎಫ್: ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದು ನಾಗರಿಕರಲ್ಲಿ ಸಂತಸವನ್ನುಂಟು ಮಾಡಿದ್ದರೂ, ಮಳೆಯಿಂದಾಗಿ ರಾಬರ್ಟ್‌ಸನ್‌ಪೇಟೆಯ ಮುಖ್ಯರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿರುವುದು ಬೇಸರವನ್ನುಂಟು ಮಾಡಿದೆ.

ತೀವ್ರವಾಗಿ ಹದಗೆಟ್ಟಿರುವ ಪ್ರಿಚರ್ಡ್ ರಸ್ತೆ, ಎಂ.ಜಿ.ಮಾರುಕಟ್ಟೆ ಮುಂಭಾಗದ ರಸ್ತೆ ಹಾಗೂ ನಗರಸಭೆಯ ಬಸ್ ನಿಲ್ದಾಣದಲ್ಲಿ ಜನ ಸಂಚರಿಸಲು ಪರದಾಡುತ್ತಿದ್ದಾರೆ. ನಗರದಲ್ಲಿ ಅತಿ ಹೆಚ್ಚು ಜನದಟ್ಟಣೆ ಮತ್ತು ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಚಾರಕ್ಕಾಗಿ ರಸ್ತೆ ದುರಸ್ತಿ ಮಾಡಬೇಕೆಂದು ಹಲವು ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ, ಪ್ರದರ್ಶನ ನಡೆಸಿದ್ದವು.

ಇಂಥ ಸಂದರ್ಭದಲ್ಲಿ ಕೆಲವೇ ದಿನಗಳಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ್ದ ಆಶ್ವಾಸನೆ ಇಲ್ಲಿಯವರೆಗೆ ನೆರವೇರಿಲ್ಲ ಎಂದು ಸಂಘಟನೆಯ ಮುಖಂಡರು ದೂರುತ್ತಿದ್ದಾರೆ.

ಎಂ.ಜಿ.ಮಾರುಕಟ್ಟೆ ಮುಂಭಾಗದ ರಸ್ತೆ ಹಾಳಾಗಿ ಸುಮಾರು ಎರಡು ವರ್ಷಕ್ಕೂ ಮೇಲಾಗಿದೆ. ಮಳೆಯಿಲ್ಲದ ಸಂದರ್ಭದಲ್ಲಿಯೇ ಅಲ್ಲಿ ಉಂಟಾಗಿರುವ ಹಳ್ಳಕೊಳ್ಳಗಳಿಂದ ವಾಹನಗಳು ಮತ್ತು ಪಾದಚಾರಿಗಳು ಸಂಚರಿಸಲು ಅಸಾಧ್ಯವಾಗಿತ್ತು. ಈಗ ಮಳೆ ಬಂದು ಹಳ್ಳಗಳಲ್ಲಿ ನೀರು ತುಂಬಿರುವುದರಿಂದ ಹಳ್ಳದ ಅರಿವಿಲ್ಲದೆ ದ್ವಿಚಕ್ರ ವಾಹನಗಳ ಸವಾರರು ಆಯತಪ್ಪಿ ಕೆಳಗೆ ಬೀಳುತ್ತಿರುವ ಘಟನೆಗಳು ನಡೆಯುತ್ತಿವೆ.

ಈಗಾಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಸುತ್ತಮುತ್ತಲಿನ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.