ADVERTISEMENT

ಕೊನೆಗೂ ಕೊಳವೆಬಾವಿ ಕೊರೆಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 5:52 IST
Last Updated 18 ಮಾರ್ಚ್ 2014, 5:52 IST

ಕೆಜಿಎಫ್‌: ಬೆಮಲ್‌ನಗರ ಬಳಿಯ ಕುವೆಂಪು­ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಡಳಿತವು ದಾಸರಹೊಸಹಳ್ಳಿ ಬಸ್‌ ನಿಲ್ದಾಣದ ಸಮೀಪದ ಕೆರೆಯಲ್ಲಿ ಸೋಮವಾರ ಬೋರ್‌ವೆಲ್‌ ಕೊರೆಸಿತು. 

ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕುವೆಂಪುನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ನೀರು ಮಾಫಿಯಾ ವ್ಯಕ್ತಿಗಳು ತಮ್ಮ ನೀರನ್ನೇ ಬಡಾವಣೆಯ ನಿವಾಸಿಗಳು ಖರೀದಿಸಬೇಕು ಎಂಬ ವ್ಯವಸ್ಥೆ ನಿರ್ಮಿಸಿದ್ದರು. ಇಲ್ಲಿ ಬಹುತೇಕ ನೌಕರರೇ ವಾಸಿಸುವವರು ಅನಾವಶ್ಯಕ ಗಲಾಟೆ ಏಕೆ ಎನ್ನುತ್ತಾ ಖಾಸಗಿ ವ್ಯಕ್ತಿಗಳಿಗೆ ಠೇವಣಿ ಕಟ್ಟಿ ನೀರು ಪಡೆಯುತ್ತಿದ್ದರು.

ಸೋಮವಾರ ಬೋರ್‌ವೆಲ್‌ನಲ್ಲಿ ಎರಡು ಇಂಚು ನೀರು ಬರುತ್ತಿದ್ದಂತೆಯೇ ಬಡಾವಣೆಯ ನಿವಾಸಿಗಳಲ್ಲಿ ಗೆಲುವಿನ ನಗೆ ಬೀರಿತು.

ಗ್ರಾಮದ ಮುಖಂಡರಾದ ನಾಗರಾಜ್‌, ಶೈಲಾವಾಸಗಿ, ಕುವೆಂಪು­ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶೇಷಗಿರಿರಾವ್, ಪದಾಧಿಕಾರಿಗಳಾದ ಹನುಮಂತರಾಯ, ಪೆರುಮಾಳ್‌, ಕರುಪಯ್ಯ, ವೆಂಕಟ್ರಾಂ ಮೊದಲಾದವರು ಇತರರಿದ್ದರು.

ಸಮಸ್ಯೆ ಕುರಿತು ‘ಪ್ರಜಾವಾಣಿ’ ಮಾ.14ರಂದು ಗ್ರಾಮ ಪಂಚಾಯಿತಿಗೆ ಸೇರಿದ ನೀರಿನ ಪೈಪ್‌ ಲೈನ್‌ವೊಂದರ ಮೂಲಕ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.