ADVERTISEMENT

ಕೋಟ್ಯಧಿಪತಿ ಕಾಂಗ್ರೆಸ್ ಅಭ್ಯರ್ಥಿ !

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 6:40 IST
Last Updated 25 ಮಾರ್ಚ್ 2011, 6:40 IST

ಕೋಲಾರ: ಬಂಗಾರಪೇಟೆಯಲ್ಲಿ ತಾವು ನಡೆಸುವ ರೆಸಾರ್ಟ್ ಹೆಸರಿನ ಮೂಲಕವೇ ಹೆಚ್ಚು ಪರಿಚಿತರಾಗಿರುವ, 43 ವರ್ಷ ವಯಸ್ಸಿನ, ಬಿ.ಎ.ಪದವೀಧರರಾದ ಕೆ.ಎಂ.ನಾರಾಯಣಸ್ವಾಮಿಯವರು ಕೋಟ್ಯಾಧಿಪತಿ. ಜೊತೆಗೆ ಸಾಲಗಾರರು. ಅಲ್ಲದೆ ಅವರು ವ್ಯಕ್ತಿ/ಸಂಸ್ಥೆಗಳಿಗೆ ಸಾಲವನ್ನೂ ನೀಡಿದ್ದಾರೆ.

ಅವರ ಕೈಯಲ್ಲಿ 5 ಲಕ್ಷ ರೂಪಾಯಿ ಇದೆ. ಅವರು ಖಾಸಗಿ ಸಂಸ್ಥೆ, ವ್ಯಕ್ತಿಗಳಿಗೆ 99.25 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಕಾರುಗಳು, ಟಿಪ್ಪರ್‌ಗಳು, ಟ್ರ್ಯಾಕ್ಟರ್‌ಗಳು, ಜೆಸಿಬಿ ಸೇರಿದಂತೆ ಅವರ ಬಳಿ 22 ವಾಹನಗಳಿವೆ. ಅವುಗಳ ಮೌಲ್ಯ 1.82 ಕೋಟಿಗೂ ಹೆಚ್ಚು. ರೂ 6.80 ಲಕ್ಷ ಮೌಲ್ಯದ 400 ಗ್ರಾಂ ಚಿನ್ನವಿದೆ. 30 ಸಾವಿರ ಮೌಲ್ಯದ 300 ಗ್ರಾಂ ಬೆಳ್ಳಿ ಇದೆ. ವಾಹನ ಮತ್ತು ಒಡವೆಗಳ ಒಟ್ಟು ಮೌಲ್ಯ 1.90 ಕೋಟಿ ರೂಪಾಯಿ.

ಗೊಲ್ಲಹಳ್ಳಿಯಲ್ಲಿ ಸರ್ವೆ ನಂ 186ರಲ್ಲಿ ರೂ 11.18 ಲಕ್ಷ ಮೌಲ್ಯದ 4 ಎಕರೆ ಜಮೀನಿದೆ. ಅದರ ಪ್ರಸ್ತುತ ಮಾರುಕಟ್ಟೆ ದರ 20 ಲಕ್ಷ ರೂಪಾಯಿ. ಎಸ್‌ಎನ್ ಸರ್ವಿಸ್ ಸ್ಟೇಷನ್, ಎಸ್.ಎನ್.ಟೂರಿಸ್ಟ್ ರೆಸಾರ್ಟ್ ಮತ್ತು ಕಾರ್ನೇಷನ್ ರಸ್ತೆಯಲ್ಲಿ ಜಮೀನಿದೆ. ಕೋಲಾರ, ಬಂಗಾರಪೇಟೆ, ಮಾಲೂರು ತಾಲ್ಲೂಕಿನ ಕೆ.ಗೊಲ್ಲಹಳ್ಳಿ, ಕೋಗಿಲಹಳ್ಳಿ, ಮರಗಲ್, ಕಾರಹಳ್ಳಿ, ಅನ್ನಿಗನಹಳ್ಳಿ, ಅರಾಭಿಕೊತ್ತನೂರು, ಮಲ್ಲಿಮಾಕನಪುರ, ಸೊಣ್ಣನಾಯಕನಹಳ್ಳಿ, ತೊರ್ನಹಳ್ಳಿಯಲ್ಲಿ 1.82 ಕೋಟಿ ಮೌಲ್ಯದ ಕೃಷಿಯೇತರ ಜಮೀನಿದೆ.

ಅಭಿವೃದ್ಧಿ, ಕಟ್ಟಡ ನಿರ್ಮಾಣಕ್ಕೆಂದು ಅವರು 3.43 ಕೋಟಿ ರೂಪಾಯಿ ವಿನಿಯೋಗಿಸಿದ್ದಾರೆ. ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5 ಕೋಟಿ ರೂಪಾಯಿ. ಅವರು ವಾಸವಿರುವ ಬಂಗಾರಪೇಟೆಯ ವಿವೇಕಾನಂದ ನಗರದಲ್ಲಿನ ಮನೆಯ ನಿವೇಶನವನ್ನು ಕೊಂಡಾಗ ಅದರ ಬೆಲೆ 49.62 ಲಕ್ಷ ರೂಪಾಯಿ. ಅದರ ಈಗಿನ ಮಾರುಕಟ್ಟೆ ಬೆಲೆ 75 ಲಕ್ಷ ರೂಪಾಯಿ.

2009-10ನೇ ಸಾಲಿನಲ್ಲಿ ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದಾಗ ಅವರ ಆದಾಯ 1 ಕೋಟಿ ರುಪಾಯಿಗೂ ಹೆಚ್ಚು. ಒಟ್ಟಾರೆಯಾಗಿ ಅವರ ಬಳಿ 1.86 ಕೋಟಿ ಮೌಲ್ಯದ ಚರ ಆಸ್ತಿ ಇದೆ. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ಥಿರ ಆಸ್ತಿ ಇದೆ. ಸ್ಥಿರ ಆಸ್ತಿಗಳನ್ನು ಅಭಿವೃದ್ಧಿಗೊಳಿಸಲು ಅವರು ಮಾಡಿರುವ ಖರ್ಚು 2.36 ಕೋಟಿ ರೂಪಾಯಿ. ಅವರ ಬಳಿ ಇರುವ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ 3.54 ಕೋಟಿ ರೂಪಾಯಿ.

ಸಾಲ; ಕೆನರಾ ಬ್ಯಾಂಕಿನಲ್ಲಿ 2.60 ಕೋಟಿ ರೂಪಾಯಿ ಸಾಲ, ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 6.40 ಲಕ್ಷ ರೂಪಾಯಿ ಅವರು ಸಾಲ ಮಾಡಿದ್ದಾರೆ. ಅಲ್ಲದೆ, ವ್ಯಕ್ತಿ/ಸಂಸ್ಥೆಗಳಿಗೆ ಅವರು 70.50 ಲಕ್ಷ ರೂಪಾಯಿ ಬಾಕಿ ಕೊಡಬೇಕಿದೆ. ಒಟ್ಟಾರೆ ಮೌಲು 3.36 ಕೋಟಿ ರೂಪಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.