ADVERTISEMENT

ಕೋಲಾರ: ಕುಡಿಯುವ ನೀರಿಗಾಗಿ ಜನರ ಧರಣಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಕೋಲಾರ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ನಗರಸಭೆ ಆವರಣದಲ್ಲಿ35ನೇ ವಾರ್ಡಿಗೆ ಸೇರಿದ ಆಜಾದ್ ನಗರದ ನಿವಾಸಿಗಳು ಶುಕ್ರವಾರ ಧರಣಿ ನಡೆಸಿದರು.

ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೊಳವೆ ಬಾವಿಗಳಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಸಮಸ್ಯೆ ಬಗೆಹರಿಸಬೇಕು ಎಂದು ಕೋರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದು ದೂರಿದರು.

ವಾರ್ಡ್‌ನ ಪ್ರತಿನಿಧಿ ನಾಜಿಯಾ ನಗರಸಭೆ ಅಧ್ಯಕ್ಷರಾಗಿದ್ದಾರೆ. ಸನ್ನಿವೇಶ ಹೀಗಿ ದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ನೀರಿಗೆ ಪರದಾಡುವಂತಾಗಿದೆ. ಟ್ಯಾಂಕರ್ ಮೂಲಕ ನೀರು ಪಡೆಯುವ ಪ್ರಯತ್ನವೂ ಹಲವು ಬಾರಿ ಈಡೇರುವುದಿಲ್ಲ. ನಿಯಮಿತವಾಗಿ ಟ್ಯಾಂಕರ್ ಬರುವುದಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಅಹವಾಲು ಆಲಿಸಲು ತಮ್ಮ ಕೊಠಡಿಯಿಂದ ಹೊರಗೆ ಬಂದ ನಾಜಿಯಾ ಎದುರು ನಿವಾಸಿಗಳು ಜೋರು ದನಿಯಲ್ಲಿ ಸಮಸ್ಯೆ ಕುರಿತು ಮಾತನಾಡಿದರು. ಅಧ್ಯಕ್ಷರಾಗಿದ್ದರೂ ವಾರ್ಡ್ ಸಮಸ್ಯೆ ನಿವಾರಣೆಗೆ ಗಮನ ಹರಿಸುತ್ತಿಲ್ಲ. ಜನರ ಸಮಸ್ಯೆ ಬಗ್ಗೆ ಕೇಳುವವರೇ ಇಲ್ಲದಂಥ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿಗಳ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ಅಧ್ಯಕ್ಷೆ ನಾಜಿಯಾ, ಕೆಲವು ದಿನಗಳ ಕಾಲಾವಕಾಶ ಕೊಡಿ. ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.