ADVERTISEMENT

`ಕ್ಷೀರಭಾಗ್ಯದಿಂದ ಗೋವು ಸಂತತಿ ಹೆಚ್ಚಳ'

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 11:15 IST
Last Updated 2 ಆಗಸ್ಟ್ 2013, 11:15 IST

ಕೋಲಾರ: ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಬಲಿಷ್ಠರಾದರೆ ದೇಶ ಬಲಿಷ್ಠವಾಗುವುದಿಲ್ಲ. ಮಕ್ಕಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ. ಅದನ್ನು ಅರಿತು ಮಕ್ಕಳಿಗೆ ಹಾಲು ಕೊಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ನೂತನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಹೊಸ ಯೋಜನೆಯಿಂದ ಮಕ್ಕಳಿಗಷ್ಟೇ ಪ್ರಯೋಜನವಾಗುವುದಿಲ್ಲ. ಬದಲಿಗೆ ಗೋವುಗಳ ಸಂತತಿ ಹೆಚ್ಚಾಗಲೂ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೀರಭಾಗ್ಯ ದೂರದೃಷ್ಟಿಯಿಂದ ಕೂಡಿದ ಯೋಜನೆ ಎಂದರು.

ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಚರ್ಚಿಸಲು ಶಾಲೆಗೆ ಬನ್ನಿ ಎಂದು ಶಿಕ್ಷಕರು ಕರೆದರೆ ಬಹಳಷ್ಟು ತಾಯಂದಿರಿಗೆ ಸಮಯವೇ ಇರುವುದಿಲ್ಲ. ಆದರೆ ಮದುವೆಯಂಥ ಕಾರ್ಯಕ್ರಮಗಳಿಗೆ ನಿಗದಿಯಾದ ಸಮಯಕ್ಕಿಂತಲೂ ಮುಂಚೆಯೇ ತಯಾರಾಗಿಬಿಡುತ್ತಾರೆ. ಇಂಥ ಮನೋಧರ್ಮ ಬದಲಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್.ವರ್ತೂರು ಪ್ರಕಾಶ್, ದೀಢೀರನೆ ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಈ ನಿಟ್ಟಿನಲ್ಲಿ ಸರ್ಕಾರ ಗಂಭಿರವಾಗಿ ಚಿಂತಿಸಬೇಕು ಎಂದರು.

ಮಕ್ಕಳಿಗೆ ಹಾಲು ಪೂರೈಸುವ ಯೋಜನೆಯನ್ನು ಆತುರದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪರಿಣಾಮವಾಗಿ ಹಾಲು ಕಾಯಿಸುವ ಪಾತ್ರೆಗಳಿಲ್ಲದೆ, ಅಡುಗೆ ಅನಿಲವಿಲ್ಲದೆ, ಲೋಟಗಳಿಲ್ಲದೆ ಹಾಲು ತಯಾರಿಸುವ ಸನ್ನಿವೇಶ ನಿರ್ಮಾಣವಾಗಿದೆ. ಇಂಥ ಅಂಶಗಳ ಬಗ್ಗೆ ಸರ್ಕಾರ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕಾಗಿದೆ ಎಂದರು.

ಶಾಸಕ ಡಿ.ಎಸ್.ವೀರಯ್ಯ, ಜಿ.ಪಂ.ಅಧ್ಯಕ್ಷೆ ಚೌಡೇಶ್ವರಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ರೆಡ್ಡಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ ಪ್ರಾಸ್ತಾವಿಕ ಮಾತನಾಡಿದರು.  ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಹನುಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವಿ.ವೆಂಕಟೇಶಮೂರ್ತಿ, ಜಿ.ಪಂ.ಸದಸ್ಯೆ ಮಂಗಮ್ಮ, ಉಪವಿಭಾಗಾಧಿಕಾರಿ ಆಯೀಷಾ ಪರ್ವೀನ್, ತಹಶೀಲ್ದಾರ್ ಸೌಮ್ಯ ಗೌಡ, ಆಂಜಿನಪ್ಪ,  ಕೆ.ಜಯದೇವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ.ಪದ್ಮನಾಭ್, ಕೆ.ಎಸ್.ನಾಗರಾಜಗೌಡ, ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.