ADVERTISEMENT

ಖಾದಿ ರಾಷ್ಟ್ರಧ್ವಜ ದುಬಾರಿ; ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 6:30 IST
Last Updated 14 ಆಗಸ್ಟ್ 2012, 6:30 IST

ಕೋಲಾರ: ಸ್ವಾತಂತ್ರ್ಯ ದಿನಾಚರಣೆ ಒಂದು ದಿನ ಬಾಕಿ ಇರುವಂತೆ ನಗರದ ವಿವಿಧ ಅಂಗಡಿಗಳಲ್ಲಿ ರಾಷ್ಟ್ರಧ್ವಜದ ಮಾರಾಟ ಸೋಮವಾರ ಭರದಿಂದ ನಡೆದಿತ್ತು. ಆದರೆ ಖಾದಿಯಿಂದ ತಯಾರಿಸಿದ ಧ್ವಜದ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ನಗರದ ಗಾಂಧಿವನದ ಸಮೀಪದಲ್ಲಿರುವ ಖಾದಿ ಭಂಡಾರಕ್ಕೆ ಭೇಟಿ ನೀಡುವವರೇ ಇರಲಿಲ್ಲ.

ನಗರದ ವಿವಿಧ ಅಂಗಡಿಗಳಲ್ಲಿ ಸಾಮಾನ್ಯ ಬಟ್ಟೆಯಲ್ಲಿ ರೂಪಿಸಿದ ರಾಷ್ಟ್ರಧ್ವಜಗಳ ಬೆಲೆ 60ರಿಂದ 150 ರೂಪಾಯಿವರೆಗೂ ಇತ್ತು. ಅಷ್ಟು ದರವನ್ನು ನೀಡಿ ಕೊಳ್ಳುವವರ ಸಂಖ್ಯೆಯೂ ಕಡಿಮೆ ಇತ್ತು.

ಅದಕ್ಕಿಂತಲೂ ದುಬಾರಿಯಾದ ಬಾವುಟಗಳು ಖಾದಿ ಭಂಡಾರದಲ್ಲಿ ಇದ್ದರೂ ಅದನ್ನು ಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಅಲ್ಲಿ ಅತ್ಯಂತ ಕಡಿಮೆ ಬೆಲೆಯ ರೂ.90ರ ರಾಷ್ಟ್ರಧ್ವಜ, ರೂ. 105 ಬೆಲೆಯ ಮಕ್ಕಳ ರಾಷ್ಟ್ರಧ್ವಜಗಳು ಇರಲಿಲ್ಲ. ರೂ. 1345, ರೂ. 1085 ಮತ್ತು ರೂ. 545 ಬೆಲೆ ದೊಡ್ಡ ಬಾವುಟಗಳಷ್ಟೇ ಇದ್ದವು. ಸಣ್ಣ ಬಾವುಟ ಬಂದಿಲ್ಲ ಎಂದು ಸಿಬ್ಬಂದಿ ತಿಳಿಸಿದರು.

ದುಬಾರಿ ಸರಿಯಲ್ಲ: ರಾಷ್ಟ್ರಪ್ರೇಮ ಮೂಡಿಸುವಂಥ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಧ್ವಜಗಳು ಕಡಿಮೆ ದರದಲ್ಲಿ ದೊರಕುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು.  ಖಾದಿ ಭಂಡಾರಕ್ಕೆ ಸಾಮಾನ್ಯ ಜನ, ವಿದ್ಯಾರ್ಥಿಗಳು ಹೋಗಿ ರಾಷ್ಟ್ರಧ್ವಜವನ್ನು ಖರೀದಿಸುವುದು ಕಷ್ಟಸಾಧ್ಯವಾಗಿದೆ ಎಂದು ಸಚ್ಚಿದಾನಂದ ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.