ADVERTISEMENT

ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧ

ಸುಲಿಗೆ ಕೇಂದ್ರಗಳಾದ ವಿ.ವಿ.ಗಳು: ಎಬಿವಿಪಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:42 IST
Last Updated 6 ಡಿಸೆಂಬರ್ 2012, 9:42 IST

ಶ್ರೀನಿವಾಸಪುರ: ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ತಾಲ್ಲೂಕು ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು.

ತಾಲ್ಲೂಕು ಎಬಿವಿಪಿ ಪದವಿ ಪೂರ್ವ ಕಾಲೇಜು ವಿಭಾಗದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಏಳುತ್ತಿವೆ. ಆದರೆ ಅವು ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿಲ್ಲ. ಇದರ ಬಗ್ಗೆ ಸರ್ಕಾರ, ಶಿಕ್ಷಣ ತಜ್ಞರ ಚಿಂತಿಸಿ ಸೂಕ್ತ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಯಿಂ ನೈಜ ಉದ್ದೇಶ ಸಫಲವಾಗಿಲ್ಲ. ಆದ್ದರಿಂದ ಸರ್ಕಾರ ಅಂಥ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಮುಖಂಡರು ಆಗ್ರಹಪಡಿಸಿದರು.

ಖಾಸಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿವೆ. ವ್ಯಾಪಾರಿ ಕೇಂದ್ರಗಳಾಗಿ ಪರಿಣಮಿಸಿವೆ. ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಯಲು ಹಾಗೂ ನಿಯಂತ್ರಿಸಲು ಕೆಲವು ನಿಯಮಗಳಿಗೆ ಕೆಲವು ತಿದ್ದುಪಡಿ ತರಬೇಕು ಎಂದು ವಿದ್ಯಾರ್ಥಿ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಮುರಳಿ ಮಾತನಾಡಿ ಖಾಸಗಿ ವಿ.ವಿ.ಗಳಿಗೆ ಅನುಮತಿ ನೀಡುವ ಮುನ್ನ ಈಗಿನ ಸಿಇಟಿ ಮಾದರಿಯಲ್ಲಿ ಶುಲ್ಕ ನೀತಿ, ಪ್ರವೇಶ ಪರೀಕ್ಷೆ, ಕುಲಪತಿ ಮತ್ತು ಕುಲಸಚಿವರ ನೇಮಕಾತಿಯಲ್ಲಿ ಶೇ 50ರಷ್ಟು ಅಧಿಕಾರ ಸರ್ಕಾರದ ಕೈಯಲ್ಲಿ ಇರುವಂತೆ ಕಾಯ್ದೆ ರೂಪಿಸಬೇಕು. ಬೇಡಿಕೆ ಈಡೇರಿಕೆವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಒಕ್ಕೂರಲಿನಿಂದ ಕೂಗಿದರು.
ಸೀಟು ಹಂಚಿಕೆ, ಶುಲ್ಕ ನಿಗದಿ, ಸಿಬ್ಬಂದಿ ನೇಮಕ, ರೋಸ್ಟರ್ ನಿಯಮಾವಳಿಗಳು, ಮೆರಿಟ್ ಇವುಗಳನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಸಂಘಟನೆ ಪದಾಧಿಕಾರಿಗಳು ಹೇಳಿದರು.

ಇದೇ ವೇಳೆ ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ರಸ್ತೆ ತಡೆ ನಡೆಸಿದರು.

ಆನಂತರ ಮಿನಿವಿಧಾನಸೌಧಕ್ಕೆ ನಡೆದು ತಹಶೀಲ್ದಾರ್‌ಗೆ ಮನವಿ ಪತ್ರ ನೀಡಿದರು.ವಿದ್ಯಾರ್ಥಿ ಮುಖಂಡರಾದ ರಾಧಾ, ಪವಿತ್ರ, ಪುನೀತ್, ಪ್ರದೀಪ್, ನಾಗರಾಜ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.