ADVERTISEMENT

ಗುಂಪು ಘರ್ಷಣೆ: ಲಘು ಲಾಠಿ ಪ್ರಹಾರ

ಸೂಲಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:14 IST
Last Updated 13 ಡಿಸೆಂಬರ್ 2012, 10:14 IST

ಬಂಗಾರಪೇಟೆ: ತಾಲ್ಲೂಕಿನ ಸೂಲಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುಣಾವಣೆಯಲ್ಲಿ ಸದಸ್ಯರನ್ನು ಸೆಳೆಯುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ನಡೆದಿದೆ.

ಸೂಲಿಕುಂಟೆ ಪಂಚಾಯಿತಿ ಆಡಳಿತವನ್ನು ತಮ್ಮ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಳೆದ ಶುಕ್ರವಾರ ಕೆಲ ಮುಖಂಡರು ಬಿಜೆಪಿ ಬೆಂಬಲಿತ ಸದಸ್ಯ ಮುಗಿಳಬೆಲೆ ವೆಂಕಟೇಶಪ್ಪ ಅವರನ್ನು ಅಪಹರಿಸಿದ್ದರು.
ಬುಧವಾರ ವೆಂಕಟೇಶಪ್ಪ ಕಾಂಗ್ರೆಸ್ ಮುಖಂಡರೊಂದಿಗೆ ಕಾರಿನಲ್ಲಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದನ್ನು ಪ್ರಶ್ನಿಸಿ ವಾಗ್ವಾದ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಾರಿನಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾದರು. ಬಿಜೆಪಿ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದರು.

ಎರಡು ಗುಂಪುಗಳ ನಡುವೆ ಏರ್ಪಟ್ಟ ಘರ್ಷಣೆ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಮುಕ್ತವಾಗಿ ಚುಣಾವಣೆ ನಡೆಯುವಂತೆ ಕ್ರಮ ಕೈಗೊಂಡರು. ನಂತರ ನಡೆದ ಚುಣಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾರಾಯಣ ಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ರಾಜಮ್ಮ ಅವರನ್ನು ಪರಾಭವಗೊಳಿಸಿದರು. ಉಪಾಧ್ಯಕ್ಷರಾಗಿ ಪ್ರಮೀಳಮ್ಮ ಅವಿರೋಧವಾಗಿ ಆಯ್ಕೆಯಾದರು.

ಸುಂದರಪಾಳ್ಯ ಗ್ರಾ.ಪಂ: ಕಾಂಗ್ರೆಸ್‌ಗೆ ಸೋಲು
ಕೆಜಿಎಫ್:
ಕಾಂಗ್ರೆಸ್ ಮತ್ತು ಮುಖಂಡ ಮುನಿರತ್ನಂನಾಯ್ಡು ಗುಂಪಿನ ನಡುವೆ ನೇರ ಹಣಾಹಣಿ ಇದ್ದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.

ಸುಂದರಪಾಳ್ಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎಂ.ಸುಬ್ರಹ್ಮಣಿಯನ್ನು ಒಂದು ಮತದಿಂದ ಸೋಲಿಸಿದ ಬಿ.ಎಂ.ಪ್ರಕಾಶ್‌ನಾಯ್ಡು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಶಾರದಮ್ಮ ಅವಿರೋಧವಾಗಿ ಆಯ್ಕೆಯಾದರು.

ಮುಖಂಡ ಮುನಿರತ್ನಂನಾಯ್ಡು ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಚುನಾವಣಾಧಿಕಾರಿಗಳಾಗಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ಹಾಜರಿದ್ದರು.

ಮುಳಬಾಗಲು:   ಗ್ರಾ.ಪಂ.ಗೆ ಆಯ್ಕೆ
ಮುಳಬಾಗಲು:
ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.

ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಮರಪ್ಪ, ಉಪಾಧ್ಯಕ್ಷರಾಗಿ ಪುಟ್ಟಿನಹಳ್ಳಿ ವೆಂಕಟರವಣಪ್ಪ, ಎಮ್ಮೆನತ್ತ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲಕ್ಷ್ಮಮ್ಮ ರಮೇಶ್‌ಗೌಡ, ಉಪಾಧ್ಯಕ್ಷರಾಗಿ ಪಾರ್ವತಮ್ಮ, ನಂಗಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆರ್.ಸವಿತಾ, ಉಪಾಧ್ಯಕ್ಷರಾಗಿ ಧನಲಕ್ಷ್ಮಮ್ಮ, ಎಚ್.ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಗೋಕುಂಟಿ ಜೋಸೆಫ್ ಕುಮಾರ್, ಉಪಾಧ್ಯಕ್ಷರಾಗಿ ನಾಗಮಣಿ, ರಾಜೇಂದ್ರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ವೆಂಕಟರಣಪ್ಪ, ಉಪಾಧ್ಯಕ್ಷರಾಗಿ ಕಳಾವತಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.