ADVERTISEMENT

ಚಾಂಪಿಯನ್‌ಶಿಪ್‌ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:02 IST
Last Updated 3 ಸೆಪ್ಟೆಂಬರ್ 2013, 6:02 IST

ಕೋಲಾರ: ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಸೆ.7ರಿಂದ 10ರವರೆಗೆ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡಕ್ಕೆ ತಾಲ್ಲೂಕಿನ ವಕ್ಕಲೇರಿಯ ಕ್ರೀಡಾಪಟು ವಿ.ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.

ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿರುವ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಜಿಲ್ಲಾ ಅಥ್ಲೆಟಿಕ್ ತರಬೇತುದಾರರಾದ ಪಿ.ಎಲ್.ಶಂಕರಪ್ಪ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿರುವ ಅರುಣ್‌ಕುಮಾರ್, 100 ಮೀ ಮತ್ತು 200 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 6 ವರ್ಷಗಳ ಬಳಿಕ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಕ್ರೀಡಾಪಟುವಾಗಿಯೂ ಅರುಣ್‌ಕುಮಾರ್ ಹೊರಹೊಮ್ಮಿದ್ದಾರೆ.

ಈ ಮುನ್ನ ಮಾಲೂರು ತಾಲ್ಲೂಕಿನ ಎಲ್. ಮಂಜುಳಾ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.  ಬೆಂಗಳೂರಿನಲ್ಲಿ ಭಾನುವಾರ ನಡೆದ ಆಯ್ಕೆ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಓಟದ ಪ್ರದರ್ಶನ ನೀಡಿದ ಅರುಣ್, ಆಯ್ಕೆ ಸಮಿತಿಯ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ.

ರಾಜ್ಯ ತಂಡದಲ್ಲಿ ಓಟ್ಟು ಒಂಭತ್ತು ಅಥ್ಲೆಟಿಕ್ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ರಾಂಚಿಗೆ ಸೆ.4 ರಂದು ರಾಜ್ಯ ತಂಡ ಪ್ರಯಾಣ ಬೆಳೆಸಲಿದೆ. ಉತ್ತಮ ಪ್ರದರ್ಶನ ನೀಡಿ ಅರುಣ್ ಜಿಲ್ಲೆಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಕೆ.ಜಯದೇವ್ ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.