ADVERTISEMENT

ಚಿಗುರೊಡೆದ ಸಂಚಲನ ತಂಡ !

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 9:55 IST
Last Updated 25 ಜನವರಿ 2011, 9:55 IST

ಕೋಲಾರ: ಬರದ ನಾಡಿನಲ್ಲಿ ‘ಸಂಚಲನ’ ಹವ್ಯಾಸಿ ರಂಗ ತಂಡ ಚಿಗುರೊಡೆದಿದೆ.

‘ನೆಲದ ಪ್ರತಿಭೆಗಳ ವಿಕಾಸ’ ಎಂಬ ಧ್ವೇಯವಾಕ್ಯದ ಅಡಿಯಲ್ಲಿ ನಗರದಲ್ಲಿ ಎರಡು ತಿಂಗಳ ಹಿಂದೆಯಷ್ಟೆ ರೂಪು ತಳೆದಿರುವ ತಂಡದಲ್ಲಿ ಸದ್ಯಕ್ಕೆ 55 ಸದಸ್ಯರಿದ್ದಾರೆ.ಉಪನ್ಯಾಸಕರು, ಸರ್ಕಾರಿ ನೌಕರರು, ಸಂಗೀತಪ್ರಿಯರು, ವಿದ್ಯಾರ್ಥಿಗಳು, ಉದ್ಯಮಿಗಳು, ಸಂಘಟನೆಗಳ ಕಾರ್ಯಕರ್ತರು -ಹೀಗೆ ವಿವಿಧ ಕ್ಷೇತ್ರಗಳ ಸಮಾನ ಮನಸ್ಕರ ತಂಡ ಇಲ್ಲಿದೆ. ಅವರಲ್ಲೆ 15 ಮಂದಿ ನಟನೆಯ ಪಾಠವನ್ನೂ ಕಲಿಯುತ್ತಿದ್ದಾರೆ !

ಜಿಲ್ಲೆಯಲ್ಲಿ ರಂಗ ಸಂಸ್ಕೃತಿಯನ್ನು ಹುಟ್ಟುಹಾಕುವ ಪ್ರಧಾನ ಆಶಯದೊಡನೆ, ಸದ್ಯಕ್ಕೆ ನಗರ ವಲಯದಲ್ಲಿ ಸಾಹಿತ್ಯ ಮತ್ತು ರಂಗ ಸಂವೇದನೆಯ ಬಳ್ಳಿಯನ್ನು ಹಬ್ಬಿಸುವ ಪುಟ್ಟ ಆಶಯದೊಂದಿಗೆ ತಂಡ ರೂಪು ತಳೆದಿದೆ. ಈ ತಂಡ ಮೊದಲ ಬಾರಿಗೆ ಸಂಕ್ರಾಂತಿ ನಾಟಕವನ್ನು ಅಭಿನಯಿಸಲು ಹೊರಟಿರುವುದು ವಿಶೇಷ. ಸದಸ್ಯರ ಪಾಕೆಟ್ ಮನಿಯೇ ಅದಕ್ಕೆ ಆರ್ಥಿಕ ಮೂಲ ಎಂಬುದು ಗಮನಾರ್ಹ.

ನೆಲದ ಪ್ರತಿಭೆಗಳ ವಿಕಾಸವೇ ತಂಡದ ಗುರಿ. ಇದು ಕೇವಲ ರಂಗತಂಡ ಮಾತ್ರವಲ್ಲ. ರಂಗಭೂಮಿ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಒಟ್ಟೊಟ್ಟಿಗೆ ಹಮ್ಮಿಕೊಳ್ಳಲಾಗುವುದು. ಹೊಸ ತಲೆಮಾರಿನ ಯುವಕ-ಯುವತಿಯರ ಕಲೆ, ಸಂಸ್ಕೃತಿಯ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ ಉದ್ದೇಶವೂ ಇದೆ. ರಂಗ ತರಬೇತಿಗಳು, ಸಾಹಿತ್ಯ ಕಮ್ಮಟಗಳು, ಕಾವ್ಯದ ಓದು ಕೂಡ ಸಂಚಲನದ ನೇತೃತ್ವದಲ್ಲಿ ನಡೆಯಲಿದೆ ಎಂಬುದು ತಂಡದ ಸಲಹೆಗಾರ ಎನ್.ಕೆ.ವರದರಾಜರ ನುಡಿ.

ಕೆಜಿಎಫ್‌ನ ಸಮುದಾಯ ಸಂಘಟನೆ, ಬೆಮೆಲ್‌ನ ‘ಕನ್ನಡ ಮಿತ್ರರು’ ಸಂಘಟನೆ, ಕೋಲಾರದ ಆದಿಮ ಸಾಂಸ್ಕೃತಿಕ ಸಂಘಟನೆಗಿಂತಲೂ ಭಿನ್ನವಾಗಿ ಚಟುವಟಿಕೆಗಳನ್ನು ಆಯೋಜಿಸಲಿದ್ದೇವೆ. ಯಾವುದೇ ಕಾಲದಲ್ಲಿಯೂ ಕಲಾವಿದರಿಗೆ ಸವಾಲಾಗಿಯೇ ಉಳಿಯಬಲ್ಲ ‘ಸಂಕ್ರಾಂತಿ’ ನಾಟಕವನ್ನು ಅಭಿನಯಿಸುವ ಮಹತ್ತರ ಪ್ರಯತ್ನವನ್ನೂ ನಡೆಸಿದ್ದೇವೆ ಎನ್ನುತ್ತಾರೆ ಅವರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ತಂಡದ ಮೊದಲ ಪ್ರಯತ್ನವಾಗಿ ಸಕ್ರಾಂತಿ ನಾಟಕದ  ಪ್ರದರ್ಶನವೂ ಯಶಸ್ವಿಯಾಗಿ ನಡೆದಿದೆ.

‘ನಮ್ಮದೊಂದು ಪುಟ್ಟ ತಂಡ. ಸಮಾನ ಮನಸ್ಕರೇ ಹೆಚ್ಚಿದ್ದೇವೆ. ಹೀಗಾಗಿ ಎರಡು ತಿಂಗಳ ಕಡಿಮೆ ಅವಧಿಯಲ್ಲೆ ನಾಟಕವೊಂದರ ಪ್ರದರ್ಶನಕ್ಕೆ ಸಜ್ಜಾಗಿದ್ದೇವೆ.
ಕನ್ನಡ-ಸಂಸ್ಕೃತಿ ಇಲಾಖೆಯ ನೆರವು ಕೂಡ ದೊರೆತಿದೆ’ ಎಂಬುದು ತಂಡದ ಅಧ್ಯಕ್ಷ, ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎ.ರಮೇಶರ ನುಡಿ.
‘ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಾಗಿ ಕಲಿಯುವವರಿಗೆ ರಂಗ ತರಬೇತಿ ನೀಡುವ ಯಾವ ಸೌಕರ್ಯವೂ ಇಲ್ಲಿಲ್ಲ. ಈಗ ಸಂಚಲನ ರಂಗ ತಂಡದ ಮೂಲಕ ಅಭಿಯನದ ಪಾಠ ಕಲಿಯುತ್ತಿದ್ದೇನೆ’ ಎಂಬುದು ಬಂಗಾರಪೇಟೆಯ ಉಪನ್ಯಾಸಕ ಚಾಂದ್‌ಪಾಷಾ.

‘ಪಾಕೆಟ್ ಮನಿ’ಯಿಂದಲೇ ಖರ್ಚು ವೆಚ್ಚಗಳನ್ನು ಭರಿಸುತ್ತಾ, ಸ್ಥಳೀಯ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶವುಳ್ಳ ಸಂಚಲನ ತಂಡವು ನಗರದಲ್ಲಿ ಮೂಡಿಸಲಿರುವ ಸಂಚಲನದ ವೈಖರಿಯನ್ನು ಕಾದುನೋಡಬೇಕಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT