ADVERTISEMENT

ಚೆಂಡು ಹೂ: ಬೆಳೆಗಾರರಲ್ಲಿ ಲಾಭದ ನಿರೀಕ್ಷೆ

ಕೆ.ನರಸಿಂಹ ಮೂರ್ತಿ
Published 30 ಆಗಸ್ಟ್ 2011, 7:30 IST
Last Updated 30 ಆಗಸ್ಟ್ 2011, 7:30 IST
ಚೆಂಡು ಹೂ: ಬೆಳೆಗಾರರಲ್ಲಿ ಲಾಭದ ನಿರೀಕ್ಷೆ
ಚೆಂಡು ಹೂ: ಬೆಳೆಗಾರರಲ್ಲಿ ಲಾಭದ ನಿರೀಕ್ಷೆ   

ಕೋಲಾರ: ಗೌರಿ-ಗಣೇಶ ಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆ, ಜಿಲ್ಲೆಯ ಚೆಂಡು ಹೂ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ 620ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಚೆಂಡು ಹೂ ಬೆಳೆಯಲಾಗಿದ್ದು, 340 ಹೆಕ್ಟೇರ್‌ನಲ್ಲಿ ಕಟಾವು ನಡೆಯುತ್ತಿದೆ. ಇನ್ನೂ ಹಲವು ರೈತರು ಚೆಂಡು ಹೂ ಬಿತ್ತನೆ ಮಾಡುವ ನಿರೀಕ್ಷೆ ಇದೆ.

ಅಸಮರ್ಪಕ ಮುಂಗಾರು ಮಳೆಯ ಪರಿಣಾಮವಾಗಿ ರಾಗಿ, ಭತ್ತ, ಕಡಲೆ ಮತ್ತಿತರ ಧಾನ್ಯ ಬೆಳೆವ ಸಾವಿರಾರು ರೈತರು ಇನ್ನೂ ಬಿತ್ತನೆ ಮಾಡುತ್ತಿರುವ ಹೊತ್ತಿನಲ್ಲೆ, ಚೆಂಡು ಹೂ ಬೆಳೆಗಾರರು ಲಾಭದತ್ತ ಮುಖ ಮಾಡಿದ್ದಾರೆ. ಹೂ ಬೆಳೆ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ರವಾನೆಯಾಗುತ್ತಿದೆ. ಬಣ್ಣ ತಯಾರಿಕೆಗೂ ಅಗತ್ಯವಿರುವುದರಿಂದ ಬೇಡಿಕೆಯೂ ಹೆಚ್ಚಿದೆ. ಕಳೆದ ಐದು ವರ್ಷದಿಂದ ಜಿಲ್ಲೆಯಲ್ಲಿ ಹೂ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಚೆಂಡು ಹೂ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ.

ತೋಟಗಾರಿಕೆ ಬೆಳೆಗಳಲ್ಲಿ ಟೊವೆುಟೊಗೆ ಪರ್ಯಾಯ ಬೆಳೆಯಾಗಿಯೇ ಚೆಂಡು ಹೂ ವಿಶೇಷ ಗಮನ ಸೆಳೆಯುತ್ತದೆ. ಟೊಮೆಟೋಗಿಂತ ಲಾಭದಾಯಕವಾಗಿರುವುದರಿಂದ ರೈತರು ಹೂ ಬೆಳೆಯಲು ಹೆಚ್ಚು ಆಸಕ್ತಿ ತೋರತೊಡಗಿದ್ದಾರೆ. ಒಂದು ಎಕರೆ ತೋಟದಲ್ಲಿ ಸುಮಾರು 400ರಿಂದ 500 ಕೆಜಿ ಹೂ ಸಿಗುತ್ತದೆ. ಒಮ್ಮೆ ನೆಟ್ಟರೆ ಗಿಡದಲ್ಲಿ 5ರಿಂದ 8 ಬಾರಿ ಹೂ ಕಟಾವು ಮಾಡಬಹುದು. ಕಡಿಮೆ ಬಂಡವಾಳ ಮತ್ತು ಹೆಚ್ಚು ಇಳುವರಿ ಬರುವ ಕಾರಣ ಚೆಂಡು ಹೂ  ರೈತರಿಗೆ ಹೆಚ್ಚು ಆಕರ್ಷಕ ಎನ್ನಿಸ ತೊಡಗಿದೆ.

ಬೆಲೆ ಹೆಚ್ಚು: ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ವೇಳೆ ಚೆಂಡುಹೂ ಬೆಲೆ ಪ್ರತಿ ಕೆಜಿಗೆ 25 ರೂಪಾಯಿ ಇತ್ತು. ಹಬ್ಬಗಳ ಸಂದರ್ಭದಲ್ಲಿ ಈ ಹೂವಿಗೆ ಬೆಲೆ ಹೆಚ್ಚು ಎಂಬುದು ವಿಶೇಷ. ಹೀಗಾಗಿ ಈ ಬಾರಿ ಗೌರಿ-ಗಣೇಶ ಹಬ್ಬಕ್ಕೆ 30ರಿಂದ 35 ರೂಪಾಯಿ ಬೆಲೆ ಬರಬಹುದು ಎಂಬುದು ಬೆಳೆಗಾರರ ಲೆಕ್ಕಾಚಾರ.ಟೊಮೊಟೊ ಲಾಭದಾಯಕವಾಗಿರುವಂತೆಯೇ, ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯೂ ಹೆಚ್ಚು. ಆದರೆ ಚೆಂಡು ಹೂ ಹಾಗಲ್ಲ. ಅದನ್ನು ಬೆಳೆದ ರೈತರಿಗೆ ತೀವ್ರತರ ಕಷ್ಟ-ನಷ್ಟ ಎದುರಾಗುವುದು ಅಪರೂಪ.

ಚೆಂಡು ಹೂ ಬೆಳೆಯಲು 1 ಎಕರೆಗೆ ಸುಮಾರು ರೂ.60 ಸಾವಿರ ಖರ್ಚಾಗುತ್ತದೆ. ಬೆಳೆದ ಬಳಿಕ ಸುಮಾರು ರೂ.1.5 ಲಕ್ಷ  ಸಂಪಾದಿಸಬಹುದು. ಅದು ದುಪ್ಪಟ್ಟು ಸಂಪಾದನೆಗಿಂತ ಹೆಚ್ಚು. ಕಳೆದ ಬಾರಿ ಪ್ರತಿ ಕೆಜಿಗೆ 5ರಿಂದ 6 ರೂಪಾಯಿ ಬೆಲೆ ಇತ್ತು. ಹೀಗಾಗಿ ಲಾಭದ ಮಾತೇ ಇರಲಿಲ್ಲ. ಹೀಗಾಗಿ ಚೆಂಡು ಹೂವನ್ನು ಕಟಾವು ಮಾಡದೆ ಜಮೀನಿನಲ್ಲೆ ಉತ್ತಿದ್ದೆವು. ಈ ಬಾರಿ ಕನಿಷ್ಠ 15 ರೂಪಾಯಿ ಬೆಲೆ ದೊರೆತಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆ 25 ರೂಪಾಯಿ ದೊರೆತಿತ್ತು. ಗಣೇಶ ಹಬ್ಬಕ್ಕೆ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ ಎಂಬುದು ತಾಲ್ಲೂಕಿನ ಬೆತ್ತನಿಯ ಬೆಳೆಗಾರ ವಿಜಯಕುಮಾರ ಅವರ ನುಡಿ.

ಮಡೇರಹಳ್ಳಿ ನರ್ಸರಿಯಿಂದ ತಂದ 8 ಸಾವಿರ ಸಸಿಗಳನ್ನು ತಮ್ಮ 1 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಸಿರುವ ಅವರು ಈಗಾಗಲೇ ಒಂದು ಬಾರಿ ಹೂ ಕಟಾವು ಮಾಡಿ ಮಾರಿದ್ದಾರೆ. ಎರಡನೇ ಕಟಾವಿಗೆ ಸಿದ್ಧತೆ ನಡೆಸಿದ್ದಾರೆ. `ಕನಿಷ್ಠವೆಂದರೂ ಒಂದು ಗಿಡದಲ್ಲಿ ಸರಾಸರಿ 5 ಕೆಜಿಗೆ ಹೂ ಬಿಡುತ್ತವೆ. ಒಂದು ತಿಂಗಳ ಕಾಲ ವಾರಕ್ಕೊಮ್ಮೆಯಾದರೂ ಹೂವುಗಳನ್ನು ಕಟಾವು ಮಾಡುತ್ತೇನೆ~ ಎಂದು ಅವರು `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು, ವಿಜಯವಾಡ, ರಾಜಮಂಡ್ರಿ ಕಡಪಲಂಕ  ಮತ್ತು ತಮಿಳುನಾಡಿನ ಚೆನ್ನೈ ಮತ್ತಿತರ ಕಡೆ  ಚೆಂಡು ಹೂವಿಗೆ ಹೆಚ್ಚು ಬೇಡಿಕೆ ಇದೆ. ಮೂರು ವರ್ಷದಿಂದ ಚೆಂಡು  ಹೂ ಬೆಳೆಯುತ್ತಿರುವ ವಿಜಯಕುಮಾರ್  ಅವರ ತೋಟಕ್ಕೆ ವಿಜಯವಾಡದಿಂದ ವ್ಯಾಪಾರಿಗಳು ಭೇಟಿ ನೀಡಿ ಕೊಂಡೊಯ್ಯುತ್ತಾರೆ.

`ಹೂವು ತೇವವಿದ್ದರೆ ಬೇಗ ಕೊಳೆಯುವ ಸಾಧ್ಯತೆ ಹೆಚ್ಚು. ವರಮಹಾಲಕ್ಷ್ಮಿ ಹಬ್ಬದ ವೇಳೆ ಹೆಚ್ಚು ಮಳೆ ಇದ್ದ ಪರಿಣಾಮ ಬೆಲೆ ಹೆಚ್ಚು ದೊರಕಲಿಲ್ಲ. ಆದರೆ ಗೌರಿ-ಗಣೇಶ ಹಬ್ಬದ ವೇಳೆಗೆ ಲಾಭ ಬರಬಹುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.