ADVERTISEMENT

ಟಿಕೆಟ್: ಎಲ್ಲ ಪಕ್ಷಗಳಲ್ಲೂ ತರಾತುರಿ ಸಿದ್ಧತೆ

ಚುನಾವಣೆ ಅಧಿಸೂಚನೆ ಪ್ರಕಟ ಇಂದು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:48 IST
Last Updated 10 ಏಪ್ರಿಲ್ 2013, 6:48 IST

ಕೋಲಾರ: ವಿಧಾನಸಭೆ ಚುನಾವಣೆ ಅಧಿಸೂಚನೆ ಬುಧವಾರ ಪ್ರಕಟವಾಗಲಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸದ ಎಲ್ಲ ಪಕ್ಷಗಳಲ್ಲೂ ತರಾತುರಿ ಸಿದ್ಧತೆಗಳು ನಡೆಯುತ್ತಿವೆ. ಪಕ್ಷೇತರರೂ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಅಧಿಸೂಚನೆ ಪ್ರಕಟವಾದ ಮಾರನೇ ದಿನ ಯುಗಾದಿ ಹಬ್ಬವಿದೆ. ಹಬ್ಬದ ಬಳಿಕ ಚುನಾವಣೆ ಕಾವು ಹೆಚ್ಚಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇದೇ ವೇಳೆ, ಕಾರ್ಯಕರ್ತರನ್ನು ಪಕ್ಷಕ್ಕೆ, ಬಣಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮಗಳೂ ಭರದಿಂದ ನಡೆಯುತ್ತಿವೆ.

ಮಾಲೂರಿನಲ್ಲಿ ಮೌನ: ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸದೆ ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟರ ಕ್ಷೇತ್ರವಾದ ಮಾಲೂರಿನ ಬಿಜೆಪಿ ಪಾಳಯದಲ್ಲಿ ಮಂಗಳವಾರ ಮೌನ ಮನೆ ಮಾಡಿತ್ತು.

ಪಕ್ಷದ ಯಾವ ಮುಖಂಡರಲ್ಲೂ ಸಮಾಧಾನದ ಕಳೆ ಕಾಣಲಿಲ್ಲ. ಶೆಟ್ಟರೂ ಕೂಡ ಮಾಲೂರಿಗೆ ಬರದೆ ಬೆಂಗಳೂರಿನಲ್ಲೇ ಇದ್ದ ಪರಿಣಾಮ ಕ್ಷೇತ್ರದಲ್ಲಿ `ಏನೂ ಹೇಳಲಾಗದ' ಸನ್ನಿವೇಶ ನಿರ್ಮಾಣವಾಗಿತ್ತು. ಇದರ ಜತೆಗೆ ಶೆಟ್ಟರು ಪಕ್ಷೇತರರಾಗಿ ಸ್ಪರ್ಧಿಸಿದರೆ, ಬಿಜೆಪಿಯಿಂದ ಸ್ಪರ್ಧಿಸುವವರು ಯಾರು ಎಂಬ ಪ್ರಶ್ನೆಯೂ ಸದ್ದಿಲ್ಲದ ಚರ್ಚೆಗೆ ದಾರಿ ಮಾಡಿದೆ.

ಜೆಡಿಎಸ್‌ನಿಂದ ಟಿಕೆಟ್ ಪಡೆದಿರುವ ಮಂಜುನಾಥಗೌಡರು ಬೆಂಬಲಿಗರೊಡನೆ ಪ್ರಚಾರ ನಡೆಸುತ್ತಿರುವ ಹೊತ್ತಿನಲ್ಲೆ ಟಿಕೆಟ್ ವಂಚಿತರಾಗಿರುವ ಆರ್.ಪ್ರಭಾಕರ್ ಪಾಳೆಯದಲ್ಲೂ ಅಸಹನೀಯ ಮೌನ ಮನೆ ಮಾಡಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಪ್ರಕಟವಾಗದ ಹಿನ್ನೆಲೆಯಲ್ಲಿ ಅಲ್ಲಿಯೂ ನೀರವತೆ ಮನೆ ಮಾಡಿತ್ತು.

ಬಿರುಸಿನ ಪ್ರಚಾರ: ಜೆಡಿಎಸ್‌ನ ಶ್ರೀನಿವಾಸಗೌಡರೊಡನೆ ಮುಖಂಡರು ತಂಡೋಪತಂಡವಾಗಿ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್‌ನ ನಸೀರ್ ಅಹ್ಮದ್ ಕೂಡ ಮುಖಂಡರೊಡನೆ ಪ್ರಚಾರದಲ್ಲಿ ತೊಡಗಿದ್ದಾರೆ. ಇವರೆದುರಿಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಸಚಿವ ಆರ್.ವರ್ತೂರು ಪ್ರಕಾಶರ ಭರಾಟೆಯೂ ಜೋರಾಗಿದೆ. ನಸೀರ್ ಅಹ್ಮದರನ್ನು ಹೊರತುಪಡಿಸಿದರೆ, ಉಳಿದ ಇಬ್ಬರು ಪರಸ್ಪರ ಹಳಿಯುವದನ್ನೇ ತಮ್ಮ ಪ್ರಚಾರದ ಸರಕಾಗಿಸಿಕೊಂಡಿದ್ದಾರೆ. ಇವರ ಬೆಂಬಲಿಗರೂ ಇವರದೇ ಹಾದಿ ತುಳಿದಿದ್ದಾರೆ.

ನಿರ್ಧಾರವಿಲ್ಲ: ಮುಳಬಾಗಲಿನಲ್ಲೂ ಯುಗಾದಿಗೆ ಒಂದೇ ದಿನ ಬಾಕಿ ಇರುವಂತೆ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಮನೆ ಮಾಡಿದೆ. `ಅವರವರ ಸಾಮರ್ಥ್ಯಕ್ಕೆ ತಕ್ಕಂತೆ' ಪ್ರಯತ್ನಗಳು ಮುಂದುವರಿದಿವೆ. ಯಾವ ಪಕ್ಷವೂ ಟಿಕೆಟ್ ಪ್ರಕಟಿಸಿರದ ಪರಿಣಾಮ ಪ್ರಚಾರದ ಕಾವು ಕೂಡ ಕಡಿಮೆ ಇದೆ.

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿರುವ ಪ್ರಕರಣವೊಂದರಲ್ಲಿ ವಂಚನೆ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಳಬಾಗಲು ಶಾಸಕ ಅಮರೇಶ್ ಅವರಿಗೆ ಮುಳಬಾಗಲಿನ ಪ್ರಧಾನ ಸಿವಿಲ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ರೂ 10 ಸಾವಿರ ದಂಡ ವಿಧಿಸಿ ಫೆ.28ರಂದು ನೀಡಿರುವ ತೀರ್ಪಿಗೆ ನಗರದ ಜಿಲ್ಲಾ ಮತ್ತು ಪ್ರಧಾನ ಸೆಷನ್ ನ್ಯಾಯಾಲಯ ಮಂಗಳವಾರ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸುವುದು ಖಚಿತವಾದಂತಾಗಿದೆ. ಆದರೆ ಕಾಂಗ್ರೆಸ್ ಟಿಕೆಟ್ ದೊರಕುವುದೇ ಎಂಬು ಸದ್ಯಕ್ಕೆ ಕುತೂಹಲಕರವಾಗಿದೆ.

ರೆಡ್ಡಿ-ಸ್ವಾಮಿ:
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ಕುಮಾರ್, ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿವೃದ್ಧಿ ವಿಚಾರಗಳನ್ನೇ ಪ್ರಸ್ತಾಪಿಸಿ ಪ್ರಚಾರ ನಡೆಸುತ್ತಿದ್ದರೂ; ಪರಸ್ಪರ ಹಳಿಯುವ ನಿದರ್ಶನಗಳೂ ಕಾಣುತ್ತಿವೆ.

ಕೆಜಿಎಫ್ ಕೂಡ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಚ್ಚಿದ ಕೆಂಡದಂತಿದೆ. ಜೆಡಿಎಸ್‌ನಿಂದ ಟಿಕೆಟ್ ಘೋಷಣೆಯಾಗಿರುವ ಮಾಜಿ ಶಾಸಕ ಭಕ್ತವತ್ಸಲಂ ಪ್ರಚಾರ ಕೈಗೊಂಡಿದ್ದಾರೆ. ಸಿಪಿಎಂನ ಅಭ್ಯರ್ಥಿ ಪಿ.ತಂಗರಾಜ್ ಕೂಡ ಪ್ರಚಾರ ಆರಂಭಿಸಿರುವುದು ಹೊಸ ಬೆಳವಣಿಗೆ.

ಬಂಗಾರಪೇಟೆಯಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ಇತ್ಯರ್ಥವಾಗದಿರುವುದರಿಂದ ಪ್ರಚಾರದ ಬಿರುಸು ಕಾಣಿಸುತ್ತಿಲ್ಲ. ಉಳಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆತವರು ಮತ್ತು ಟಿಕೆಟ್‌ಗಾಗಿ ಕಾದವರೆಲ್ಲರೂ ಈ ಬಾರಿಯು ಯುಗಾದಿ ತಮಗೆ ಒಳ್ಳೆಯದನ್ನೇ ಮಾಡಲಿ ಎಂದು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.