ADVERTISEMENT

ತವರು ಮನೆ ದೂರವಾಗಿಸಿದ ತೆಲಂಗಾಣ !

ಕೆ.ನರಸಿಂಹ ಮೂರ್ತಿ
Published 3 ಆಗಸ್ಟ್ 2013, 11:16 IST
Last Updated 3 ಆಗಸ್ಟ್ 2013, 11:16 IST

ಕೋಲಾರ: ಕಳೆದ 15 ವರ್ಷದಿಂದ ಇಂಥದ್ದೊಂದು ಸನ್ನಿವೇಶವನ್ನು ನಾವು ನೋಡಿರಲಿಲ್ಲ. ಇದೇ ಮೊದಲ ಬಾರಿ ಆಂಧ್ರಪ್ರದೇಶ ವಿಭಜನೆ ವಿವಾದವು ಆತ್ಮಾಹುತಿ ಮಟ್ಟಕ್ಕೆ ಹೋಗಿದೆ. ಪ್ರಕ್ಷುಬ್ದ ಸನ್ನಿವೇಶ ನಿರ್ಮಾಣವಾಗಿದ್ದರಿಂದ ಶಾಲೆಗೆ ರಜೆ ಕೊಟ್ಟ ಪರಿಣಾಮ ಮಗಳ ಜೊತೆಗೆ ತವರಿಗೆ ಬರೋಣವೆಂದು ಹೊರಟರೆ ದಾರಿಯುದ್ದಕ್ಕೂ ಬಂದ್ ಬಿಸಿ ಹಬ್ಬಿತ್ತು. ಆತಂಕದ ನಡುವೆಯೇ ಮುಖ್ಯರಸ್ತೆಗಳನ್ನು ಬಿಟ್ಟು ಹಳ್ಳಿಗಳನ್ನು ಸುತ್ತಿಕೊಂಡು ಕೋಲಾರಕ್ಕೆ ಬರುವ ಹೊತ್ತಿಗೆ ಸಾಕುಸಾಕಾಯಿತು....

-ಆಂಧ್ರಪ್ರದೇಶದ ವಿ.ಕೋಟದಿಂದ ಶುಕ್ರವಾರ ಬೆಳಿಗ್ಗೆ ಹೊರಟು ನಗರದ ಮಹಾಲಕ್ಷ್ಮಿ ಬಡಾವಣೆಯ ಅಣ್ಣನ ಮನೆಗೆ ಮಧ್ಯಾಹ್ನದ ಹೊತ್ತಿಗೆ ಬಂದ ಸಿ.ಎ.ನಾಗಮಣಿ ನಿಡುಸುಯ್ಯುತ್ತಾ ಹೇಳಿದರು.

ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸಿ ಚಿತ್ತೂರು ಜಿಲ್ಲೆಯೂ ಸೇರಿದಂತೆ ಆಂಧ್ರದ ಹಲವೆಡೆ ಉಗ್ರ ಪ್ರತಿಭಟನೆ, ಬಂದ್‌ಗಳು ನಡೆಯುತ್ತಿವೆ. ಅದೇ ಜಿಲ್ಲೆಗೆ ಸೇರಿದ ವಿ.ಕೋಟದಲ್ಲೂ ಪ್ರತಿಭಟನೆಯ ಕಾವು ಬಿಸಿ ಪಡೆದುಕೊಂಡಿದೆ. ಹೀಗಾಗಿ ಅಲ್ಲಿನ ಶಾಲೆ, ಕಾಲೇಜುಗಳಿಗೆ ಸರ್ಕಾರ ಆ. 4ರವರೆಗೂ ರಜೆ ಘೋಷಿಸಿದೆ.

ಈ ಬಿಡುವಿನಲ್ಲೇ ಮಗಳೊಡನೆ ತವರು ಮನೆಗೆ ಭೇಟಿ ನೀಡಲು ಮುಂದಾದ ಈ ಗೃಹಿಣಿಯು ಸಾಹಸ ಪ್ರಯಣದ ಅನುಭವಕ್ಕೆ ಎದುರಾಗಿದ್ದಾರೆ. ಆಂಧ್ರದ ವಿ.ಕೋಟ ಮತ್ತು ಕರ್ನಾಟಕದ ಕೋಲಾರದ ನಡುವಿನ ಅಂತರ ಕೇವಲ ಸುಮಾರು 45 ಕಿ.ಮೀ ಅಷ್ಟೆ. ವಿ ಕೋಟದಿಂದ ಖಾಸಗಿ ವಾಹನದಲ್ಲಿ ಪ್ರಯಾಣಿಸಿದರೆ ಒಂದೂ ಕಾಲು ಗಂಟೆ ಅವಧಿಯೊಳಗೆ ಕೋಲಾರವನ್ನು ತಲುಪಬಹುದು. ಆದರೆ ಈ ಗೃಹಿಣಿ ತಮ್ಮ ಮಗಳೊಡನೆ ಕೋಲಾರಕ್ಕೆ ಬರಲು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬೇಕಾಯಿತು.

18 ವರ್ಷದ ಹಿಂದೆ ವಿ.ಕೋಟದ ಜಿ.ವಿ.ನಾಗಭೂಷಣ ಅವರೊಡಗೆ ವಿವಾಹವಾಗಿ ಅಲ್ಲಿನ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ನೆಲೆಸಿರುವ ಈ ಗೃಹಿಣಿಗೆ ಆಂಧ್ರಪ್ರದೇಶದ ವಿಭಜನೆಯ ವಿವಾದವು ಕೋಲಾರ-ವಿ.ಕೋಟದ ನಡುವಿನ ಪ್ರಯಾಣದ ಅಂತರವನ್ನು ದೀರ್ಘವಾಗಿಸಿತ್ತು.

ವಿ ಕೋಟದಿಂದ ಕೋಲಾರಕ್ಕೆ ಬರುವ ಮಾರ್ಗದಲ್ಲಿರುವ ಕುಪ್ಪಂ, ರಾಜ್‌ಪೇಟೆ ಮತ್ತು ಪಲಮನೇರು ರಸ್ತೆಗಳನ್ನು ಬಂದ್ ಮಾಡಿದ್ದರು. ರಸ್ತೆಗಳಲ್ಲಿ ಟೈರ್ ಸುಟ್ಟಿದ್ದರು. ಹೀಗಾಗಿ ಬೇರೆ ಮಾರ್ಗದಲ್ಲಿ ಹಳ್ಳಿಗಳನ್ನು ಸುತ್ತಿ ಬರಬೇಕಾಯಿತು ಎಂದು ಅವರು ಹೇಳಿದರು.

ವಿ.ಕೋಟದಿಂದ ಕೆಜಿಫ್ ಮೂಲಕ ಕೋಲಾರಕ್ಕೆ ಬರಲು ಸಾಧ್ಯವಾಗದ ಸನ್ನಿವೇಶವಿದ್ದರಿಂದ ಮುಳಬಾಗಲು ಮೂಲಕ ಬರುವ ಪ್ರಯತ್ನ ಮಾಡಿದೆವು. ಆದರೆ ಮುಳಬಾಗಲು ತಲುಪಲು ಮುಖ್ಯ ರಸ್ತೆಗಳನ್ನು ಬಿಟ್ಟು ಪಟ್ಟಪಲ್ಲಿ, ನಕ್ಕನಪಲ್ಲಿ ಮೂಲಕ ತಾಯಲೂರು ತಲುಪಿ ಕೋಲಾರಕ್ಕೆ ಬಂದೆವು. ಬೆಳಿಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 1 ಗಂಟೆಗೆ ಕೋಲಾರ ತಲುಪಿದೆವು ಎಂದು ಅವರು ಸ್ಮರಿಸಿದರು.

ವಿ.ಕೋಟದಿಂದ ಬೇತಮಂಗಲ ಮಾರ್ಗದಲ್ಲಿ ಕೋಲಾರಕ್ಕೆ ಬರುವ ಮಾರ್ಗದಲ್ಲಿ ಬಂದ್ ಬಿಸಿ ಹೆಚ್ಚಿತ್ತು. ಕೆಜಿಎಫ್ ಮಾರ್ಗವೂ ಆತಂಕಕಾರಿಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಳಬಾಗಲು ಮಾರ್ಗದಲ್ಲೇ ಸಂಚರಿಸಿ ಬಂದೆವು. 15 ವರ್ಷದಲ್ಲಿ ಇಂಥ ಗಲಾಟೆಯನ್ನು ನಾವು ವಿ.ಕೋಟದಲ್ಲಿ ನೋಡಿರಲೇ ಇಲ್ಲ ಎಂದು ವಿಸ್ಮಯ ವ್ಯಕ್ತಪಡಿಸಿದರು.

ವಾಪಸು ಯಾವಾಗ?: ಮತ್ತೆ ಯಾವಾಗ ವಿ.ಕೋಟಕ್ಕೆ ವಾಪಸು ಹೋಗ್ತೀರಿ ಎಂಬ ಪ್ರಶ್ನೆಗೆ ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ.

ಆ,4ರವರೆಗೂ ಶಾಲೆಗೆ ರಜೆ ನೀಡಲಾಗಿದೆ. ಆ ಹೊತ್ತಿಗೆ ವಿಭಜನೆಯ ವಿವಾದದ ಸನ್ನಿವೇಶವು ತಿಳಿಯಾಗಬಹುದೇ ಎಂಬ ಪ್ರಶ್ನೆಯೂ ಇದೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರವಷ್ಟೇ ನಿರ್ಧರಿಸುತ್ತೇವೆ ಎಂದು ಅವರು ಹೇಳಿ ಮೌನವಾದರು. 

ವಿ.ಕೋಟದ ಇಂಡಸ್ ವ್ಯಾಲಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಅವರ ಮಗಳು ವಚನಾಮೃತ ತನ್ನ ಸೋದರಮಾವ ಸಿ.ಎ.ರಮೇಶ್ ಅವರಿಗೆ ತಮ್ಮ ಪ್ರಯಾಣದ ಆತಂಕದ ಕ್ಷಣಗಳನ್ನು ವಿವರಿಸುತ್ತಿದ್ದಳು.

ಈ ಬಂದ್, ಗಲಾಟೆಯ ನಡುವೆ ಕೋಲಾರಕ್ಕೆ ಹೋಗುತ್ತೇವೋ ಇಲ್ಲವೋ ಎಂದು ಭಯವಾಗುತ್ತಿತ್ತು. ಆದರೆ ಆಂಧ್ರದ ಗಡಿ ದಾಟಿ ಕರ್ನಾಟಕದ ಗಡಿಗೆ ಬಂದ ಮೇಲೆ ಸಖತ್ ಖುಷಿಯಾಯಿತು ಎಂಬ ಆಕೆಯ ಮಾತಿಗೆ ರಮೇಶ್ ತಲೆದೂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.